ಹುಬ್ಬಳ್ಳಿ: ಭಾರತ ಎ vs ನ್ಯೂಜಿಲೆಂಡ್ ಎ ಟೆಸ್ಟ್: ಭಾರತ ತಂಡಕ್ಕೆ ಆರಂಭಿಕ ಆಘಾತ
ಹುಬ್ಬಳ್ಳಿ, ಸೆಪ್ಟೆಂಬರ್ 9 : ಇಲ್ಲಿನ ರಾಜನಗರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾರತ ಎ ಹಾಗೂ ನ್ಯೂಜಿಲೆಂಡ್ ಎ ತಂಡದ ನಡುವಣ 2ನೇ ಅನಧಿಕೃತ ಟೆಸ್ಟ್ ಪಂದ್ಯ 2ನೇ ದಿನ ಆರಂಭಗೊಂಡಿತು. ಗುರುವಾರ ಆರಂಭವಾಗಬೇಕಿದ್ದ ಪಂದ್ಯ ತುಂತುರು ಮಳೆ ಹಾಗೂ ಮೈದಾನ ಒದ್ದೆಯಾಗಿದ್ದ ಕಾರಣ ಮೊದಲ ದಿನದಾಟ ರದ್ಧಾಗಿತ್ತು.
2ನೇ ದಿನವಾದ ಶುಕ್ರವಾರ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಬ್ರೂಸ್, ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಭಾರತ ಎ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ ಹಾಗೂ ಅಭಿಮನ್ಯು ಈಶ್ವರನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ, ಆರಂಭದಲ್ಲೆ ಕಿವೀಸ್ ಬೌಲರ್‌ಗಳು ಮೇಲುಗೈ ಸಾಧಿಸಿ ಭೋಜನರ ವಿರಾಮಕ್ಕೂ ಮುನ್ನ 2 ವಿಕೆಟ್ ಉಡಾಯಿಸಿದರು.
ಅಭಿಮನ್ಯು ಈಶ್ವರನ್ 36 ಎಸೆತಗಳಲ್ಲಿ 22 ರನ್‌ಗಳಿಸಿ ವ್ಯಾನ್ ಬೀಕ್‌ಗೆ ವಿಕೆಟ್ ಒಪ್ಪಿಸಿದರೆ, ರುತುರಾಜ್ ಗಾಯಕ್ವಾಡ್ ಕೇವಲ 5 ರನ್‌ಗಳಿಸಿ ವ್ಯಾನ್ ಬೀಕ್‌ಗೆ 2ನೇ ಬಲಿಯಾದರು.

ಪ್ರಸ್ತುತ ಭಾರತ ಎ ತಂಡದ 19 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 57 ರನ್‌ಗಳಿಸಿದೆ. ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿರುವ ನಾಯಕ ಪಾಂಚಾಲ್ 59 ಎಸೆತಗಳಲ್ಲಿ 5 ಬೌಂಡರಿ ಸಹಿತ 25 ರನ್‌ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಇವರಿಗೆ ರಜತ್ ಪಾಟೀದಾರ್ ಸಾಥ್ ನೀಡುತ್ತಿದ್ದಾರೆ.
ತಡವಾಗಿ ಆರಂಭ
ಶುಕ್ರವಾರ ಬೆಳಗ್ಗೆ 9.30ಕ್ಕೆ ಶುರುವಾಗಬೇಕಿದ್ದ ಪಂದ್ಯವು ಕ್ರೀಡಾಂಗಣದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ ಬೆಳಗ್ಗೆ 10.30ಕ್ಕೆ ಆರಂಭಗೊಂಡಿತು. ಕರ್ನಾಟಕದ ಆಟಗಾರ ಪ್ರಸಿಧ್ ಕೃಷ್ಣ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಮಹಾರಾಷ್ಟ್ರದ ಆಟಗಾರ ಶಾರ್ದೂಲ್ ಠಾಕೂರ್, ಅಂತಿಮ 11ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವು ಬೆಂಗಳೂರಿನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿತ್ತು. ಸಾಕಷ್ಟು ರನ್‌ಗಳ ಹೊಳೆ ಹರಿದಿದ್ದ ಆ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತ್ತು.

ಹುಬ್ಬಳ್ಳಿಯಲ್ಲಿ ಈ ಹಿಂದೆ 2019ರ ಮೇ ತಿಂಗಳಲ್ಲಿ ಭಾರತ-ಶ್ರೀಲಂಕಾ ಎ ತಂಡಗಳ ನಡುವೆ 1 ಚತುರ್ದಿನ ಪಂದ್ಯ ಹಾಗೂ 2 ಏಕದಿನ ಪಂದ್ಯಗಳು ನಡೆದಿದ್ದವು. ಇದಕ್ಕೂ ಮೊದಲು 2017ರಲ್ಲಿ ಭಾರತ-ಬಾಂಗ್ಲಾದೇಶ ಎ ಮಹಿಳಾ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಹುಬ್ಬಳ್ಳಿ ಆತಿಥ್ಯ ವಹಿಸಿತ್ತು.
ಹುಬ್ಬಳ್ಳಿಯಲ್ಲಿ 2013ರಲ್ಲಿ ಭಾರತ- ವೆಸ್ಟ್ ಇಂಡೀಸ್ ಎ ತಂಡಗಳ ನಡುವೆ ಮೊದಲ ಬಾರಿ ಆಯೋಜನೆಯಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆಗ ಖ್ಯಾತ ಆಟಗಾರರಾದ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ, ಜಹೀರ್ ಖಾನ್ ಆಡಿದ್ದರು. ಈಗ ಭಾರತ ಟೆಸ್ಟ್ ತಂಡದಲ್ಲಿರುವ ಚೇತೇಶ್ವರ ಪೂಜಾರ ಈ ಮೈದಾನದಲ್ಲಿ ಅಜೇಯ ತ್ರಿಶತಕ ಬಾರಿಸಿದ್ದು, ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಉಳಿದಿದೆ. ಈ ಬಾರಿ ಋತುರಾಜ್ ಗಾಯಕವಾಡ, ಪ್ರಸಿಧ್ ಕೃಷ್ಣ, ರಾಹುಲ್ ಚಾಹರ್, ಕುಲದೀಪ್ ಯಾದವ, ಉಮ್ರಾನ್ ಮಲ್ಲಿಕ್ ಅವರಂತಹ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಭಾರತ ಎ ತಂಡದಲ್ಲಿ ಇದ್ದಾರೆ.












Click it and Unblock the Notifications