Ind vs WI T20: ಯಾರಿಗೆಲ್ಲಾ ಸಿಗುತ್ತೆ ಅವಕಾಶ? ಪ್ಲೇಯಿಂಗ್ ಇಲೆವೆನ್, ಪಂದ್ಯದ ಸಮಯ, ನೇರಪ್ರಸಾರ ವಿವರ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದಿರುವ ಭಾರತ ತಂಡ ಈಗ ಟಿ20 ಸರಣಿಗೆ ಸಜ್ಜಾಗುತ್ತಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಹಲವು ಯುವ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ.
2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಅಣಿಯಾಗಿಸಲು ಇದು ಉತ್ತಮ ಸಮಯವಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದು, ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಂಜು ಸ್ಯಾಮ್ಸನ್ ಮತ್ತು ಯಜುವೇಂದ್ರ ಚಹಾಲ್ ಕೂಡ ಭಾರತ ತಂಡದಲ್ಲಿದ್ದು, ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಇಬ್ಬರೂ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮುಂಬರುವ ಏಷ್ಯಾಕಪ್ 2023ರ ಟೂರ್ನಿಗೆ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ಚೊಚ್ಚಲ ಪಂದ್ಯವನ್ನು ಆಡುವ ಉತ್ಸಾಹದಲ್ಲಿದ್ದಾರೆ. ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿದ್ದಾರೆ.
ಹಲವು ಆಟಗಾರರು ವಾಪಸ್
ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತೆ ಭಾರತ ತಂಡಕ್ಕೆ ಮರಳಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರು ಟಿ20 ಮಾದರಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದು ಹಲವು ಹೊಸ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ತಂಡದ ವಿಶ್ವಾಸ ಹೆಚ್ಚಿಸಿದೆ. ಮುಖೇಶ್ ಕುಮಾರ್ ಕೂಡ ವಿಕೆಟ್ ಪಡೆದಿರುವುದು ಟಿ20 ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಭಾರತ ತಂಡದ ಸಂಭಾವ್ಯ ಆಡುವ ಬಳಗ
ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ / ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್ / ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ರವಿ ಬಿಷ್ಣೋಯ್.
ವೆಸ್ಟ್ ಇಂಡೀಸ್ ಆಡುವ ಬಳಗ
ಜಾನ್ಸನ್ ಚಾರ್ಲ್ಸ್, ಕೈಲ್ ಮೇಯರ್ಸ್ (ಉಪನಾಯಕ), ಶಾಯ್ ಹೋಪ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಅಕೆಲ್ ಹೋಸೇನ್, ಒಬೆಡ್ ಮೆಕಾಯ್, ಅಲ್ಜಾರಿ ಜೋಸೆಫ್.
ಪಂದ್ಯದ ಸಮಯ, ನೇರಪ್ರಸಾರ ವಿವರ
ಆಗಸ್ಟ್ 3ರಂದು ಗುರುವಾರ ಭಾರತೀಯ ಕಾಲಮಾನ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಮೊದಲನೇ ಟಿ20 ಪಂದ್ಯ ನಡೆಯಲಿದೆ. ಭಾರತದಲ್ಲಿ ಪಂದ್ಯದ ನೇರಪ್ರಸಾರವನ್ನು ಜಿಯೋ ಸಿನಿಮಾ, ಡಿಡಿ ಸ್ಪೋರ್ಟ್ಸ್ ಮತ್ತು ಫ್ಯಾನ್‌ಕೋಡ್‌ನಲ್ಲಿ ವೀಕ್ಷಿಸಬಹುದಾಗಿದೆ.












Click it and Unblock the Notifications