ಗಾಲೆಯಲ್ಲಿ ಭಾರತಕ್ಕೆ ಭಾರಿ ಜಯ.. ಕನ್ನಡಿಗ ಅನಿಲ್ ಕುಂಬ್ಳೆ ಅವರ ಅಮೋಘ ಸಾಧನೆ ಸಾಲಿಗೆ ಸೇರಿದ ಮಾನವ್ ಸುತಾರ್
IND vs SL 1st Test: ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವು 165 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತದ ಪರ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಅವರ ಅದ್ಭುತ ಬೌಲಿಂಗ್ ದಾಳಿಯು ಈ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಅಲ್ಲದೆ, ಅವರು ಇದೇ ವೇಳೆ ಅಪರೂಪದ ಸಾಧನೆಯೊಂದನ್ನ ಮಾಡಿ ಗಮನ ಸೆಳೆದರು.
ಮಾವನ್ ಸುತಾರ್ ಅವರು ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಿಂದ ಸೇರಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯದ್ಭುತ ಸಾಧನೆ ಮಾಡಿದರು. ಜೊತೆಗೆ ಶ್ರಿಲಂಕಾ ವಿರುದ್ಧ ಭಾರತ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಧನಂಜಯ ಡಿ ಸಿಲ್ವಾ, ದಿನುಷಾ ಉತ್ತಮ ಪ್ರದರ್ಶನ
ಪಂದ್ಯದ ಐದನೇ ದಿನದ ಬೆಳಗಿನ ವೇಳೆ ಈ ಪಿಚ್‌ನಲ್ಲಿ ಭಾರತದ ಬೌಲರ್‌ಗಳು ಪರದಾಡಿದರು. ಶ್ರೀಲಂಕಾ ತಂಡದ ನಾಯಕ ಧನಂಜಯ ಡಿ ಸಿಲ್ವಾ ಮತ್ತು ಸೊನಾಲ್ ದಿನುಷಾ ಜೋಡಿಯು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಬೌಲರ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ಇವರು ಸುಮಾರು 30ಕ್ಕೂ ಹೆಚ್ಚು ಓವರ್‌ಗಳವರೆಗೂ ಬ್ಯಾಟ್ ಬೀಸಿ ವಿಕೆಟ್ ಬೀಳದಂತೆ ತಡೆಯುವ ಮೂಲಕ ಭಾರತಕ್ಕೆ ಕಠಿಣ ಸವಾಲೊಡ್ಡಿರು.
ಕುಗ್ಗದ ಟೀಮ್ ಇಂಡಿಯಾ ನಾಯಕ ಗಿಲ್
ಆದರೂ ಕುಗ್ಗದ ನಾಯಕ ಶುಭಮನ್ ಗಿಲ್ ತಮ್ಮ ಬೌಲರ್‌ಗಳನ್ನು ನಿರಂತರವಾಗಿ ಬದಲಾಯಿಸುತ್ತಾ ಬಂದರು. ಕೊನೆಗೆ ಧನಂಜಯ ಡಿ ಸಿಲ್ವಾ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ನಡೆದರು. ಬಳಿಕ ಪ್ರಸಿದ್ಧ್ ಕೃಷ್ಣ ಮಾರಕ ಬೌಲಿಂಗ್ ದಾಳಿ ನಡೆಸಿ ಡಿಕ್ವೆಲ್ಲಾ ಅವರ ವಿಕೆಟ್ ಕಿತ್ತು ಟೀಮ್ ಇಂಡಿಯಾಗೆ ಆಸರೆಯಾದರು.
36 ನಿಮಿಷಗಳಲ್ಲಿ 4 ವಿಕೆಟ್ ಕಬಳಿಸಿದ ಭಾರತ
ವಿರಾಮದ ವೇಳೆಗೆ ಶ್ರೀಲಂಕಾ ಗೆಲುವಿಗಾಗಿ ಹೋರಾಡುತ್ತಿತ್ತಾದರೂ, ನಂತರ ಪಂದ್ಯದ ದಿಕ್ಕೇ ಬದಲಾಯಿತು. ಭಾರತೀಯ ಬೌಲರ್‌ಗಳು ಕೇವಲ 36 ನಿಮಿಷಗಳಲ್ಲಿ ಶ್ರೀಲಂಕಾದ ಬಾಕಿ ಉಳಿದ 4 ವಿಕೆಟ್‌ಗಳನ್ನು ಕಬಳಿಸಿ ಪಂದ್ಯವನ್ನ ಮುಗಿಸಿದರು. ಬಳಿಕ ತಕ್ಷಣವೇ ಗಾಲೆ ಮೈದಾನದಲ್ಲಿ ಭಾರೀ ಮಳೆ ಪ್ರಾರಂಭವಾಯಿತು. ಟೀಮ್ ಇಂಡಿಯಾ ಬೌಲರ್‌ಗಳ ಮಿಂಚಿನ ದಾಳಿಯಿಂದಾಗಿ ಪಂದ್ಯವು ಮಳೆಗೆ ಸಿಲುಕುವ ಮುನ್ನವೇ ಮುಕ್ತಾಯಗೊಂಡಿತು. ಈ ಮೂಲಕ ಭಾರತ ಸುಲಭ ಜಯ ದಾಖಲಿಸಿತು.
ಮಾನವ್ ಸುತಾರ್ ಅತ್ಯದ್ಭುತ ಸಾಧನೆ
ಅದರಲ್ಲೂ ಈ ಪಂದ್ಯದಲ್ಲಿ ಮಾನವ್ ಸುತಾರ್ ಅವರು ಶ್ರೇಷ್ಠ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್‌ಗಿಂತಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಪಂದ್ಯದ ವೇಳೆ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಅವರು ತಾವೇಕೆ ಭಾರತ ತಂಡದ ಭವಿಷ್ಯದ ಪ್ರಮುಖ ಸ್ಪಿನ್ನರ್ ಆಗಬಾರದು ಎಂಬುದನ್ನು ತೋರಿಸಿದರು. ಇನ್ನೂ
ಈ ಗೆಲುವಿನೊಂದಿಗೆ ಭಾರತ ತಂಡವು ಸರಣಿಯಲ್ಲಿ ಶುಭಾರಂಭ ಮಾಡಿದ್ದು, ಮುಂದಿನ ಕೊಲಂಬೊ ಟೆಸ್ಟ್ ಪಂದ್ಯದಲ್ಲಿಯೂ ತನ್ನ ಸರಣಿ ಶ್ರೇಷ್ಠ ಪ್ರದರ್ಶನವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.
10 ವಿಕೆಟ್ ಕಬಳಿಸಿದ ಮಾನವ್ ಸುತಾರ್
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಯುವ ಸ್ಪಿನ್ನರ್ ಮಾನವ್ ಸುತಾರ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ. ಇಡೀ ಪಂದ್ಯದಲ್ಲಿ 131 ರನ್ ನೀಡಿ 10 ವಿಕೆಟ್ ಕಬಳಿಸುವ ಮೂಲಕ ಅವರು ಅಪರೂಪದ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದರಲ್ಲಿ 10 ವಿಕೆಟ್‌ಗಳ ಸಾಧನೆ ಮಾಡಿದ ಭಾರತೀಯ ಬೌಲರ್‌ಗಳ ಅಪರೂಪದ ಸಾಲಿಗೆ ಮಾನವ್ ಸುತಾರ್ ಈಗ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರಂತಹ ದಿಗ್ಗಜರು ಮಾತ್ರ ಈ ಸಾಧನೆ ಮಾಡಿದ್ದರು.
ಅಷ್ಟೇ ಅಲ್ಲದೆ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಭಾರತೀಯ ಬೌಲರ್ ಒಬ್ಬರು ನೀಡಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ (10/131) ಎಂಬ ಹೆಗ್ಗಳಿಕೆಗೂ ಸುತಾರ್ ಪಾತ್ರರಾಗಿದ್ದಾರೆ. ಇವರ ಅದ್ಭುತ ಪ್ರದರ್ಶನವನ್ನು ಭಾರತೀಯ ನಾಯಕ ಶುಭ್‌ಮನ್ ಗಿಲ್ ಮುಕ್ತಕಂಠದಿಂದ ಹೊಗಳಿದ್ದಾರೆ.
'ಮಾನವ್ ಸುತಾರ್ ಅವರಲ್ಲಿರುವ ಸಾಮರ್ಥ್ಯ ಮತ್ತು ಶಿಸ್ತು ನೋಡಿದರೆ, ಅವರು ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರ ಉತ್ತಮ ಟೆಸ್ಟ್ ಆಟಗಾರನಾಗುವ ಎಲ್ಲ ಲಕ್ಷಣಗಳಿವೆ,' ಎಂದು ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಗೆಲುವಿನಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತದ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ತಂಡದ ಗೆಲುವಿನ ಶೇಕಡಾವಾರು ಪ್ರಮಾಣದಲ್ಲಿ ಉತ್ತಮ ಸುಧಾರಣೆ ಆಗಿದೆ.
ಪ್ರಸ್ತುತ WTC ಶೇಕಡವಾರು ಅಂಕಪಟ್ಟಿ ವಿವರ
* ಭಾರತ: 64 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ (ಶೇಕಡಾವಾರು ಅಂಕ: 53.33%).
* ಆಸ್ಟ್ರೇಲಿಯಾ: 77.78% ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
* ದಕ್ಷಿಣ ಆಫ್ರಿಕಾ: 75% ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.
* ನ್ಯೂಜಿಲೆಂಡ್: 72.22% ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.
* ಬಾಂಗ್ಲಾದೇಶ: 66.67% ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಉಳಿಯಲು ಮತ್ತು ಅಗ್ರ ನಾಲ್ಕರ ಒಳಗೆ ಸ್ಥಾನ ಗಿಟ್ಟಿಸಿಕೊಳ್ಳಲು ಭಾರತ ತಂಡಕ್ಕೆ ಮುಂಬರುವ ಪ್ರತಿಯೊಂದು ಟೆಸ್ಟ್ ಪಂದ್ಯವೂ ಅತ್ಯಂತ ನಿರ್ಣಾಯಕವಾಗಿದ್ದು, ಉಳಿದ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಟೀಮ್ ಇಂಡಿಯಾ ತನ್ನ ಸ್ಥಾನವನ್ನು ಬದಲಿಸಿಕೊಳ್ಳಲಿದೆಯಾ ಎಂದು ಕಾದುನೋಡಬೇಕಿದೆ.


Click it and Unblock the Notifications
