Ind vs SA ODI: ಅರ್ಷದೀಪ್, ಆವೇಶ್ ಖಾನ್ ಮಾರಕ ಬೌಲಿಂಗ್: 116 ರನ್‌ಗಳಿಗೆ ಆಲೌಟ್ ಆದ ಹರಿಣಗಳು
ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಮಿಂಚಿನ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರಿಸಿದೆ. ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಅವರ ವೇಗದ ಬೌಲಿಂಗ್‌ಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 116 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಭಾರತದ ವೇಗಿಗಳು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಪಡೆಯ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿದರು. 2ನೇ ಓವರ್ ನಲ್ಲೇ ದಕ್ಷಿಣ ಆಫ್ರಿಕಾ ಎರಡು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.

ಅರ್ಷದೀಪ್ ಸಿಂಗ್ ತಮ್ಮ ಮೊದಲ ಓವರ್ ನಲ್ಲೇ ಎರಡು ವಿಕೆಟ್ ಪಡೆದು ಮಿಂಚಿದರು. ರೀಜಾ ಹೆಂಡ್ರಿಕ್ಸ್ ಔಟಾದ ನಂತರದ ಎಸೆತದಲ್ಲೇ ರಾಸಿ ವಾನ್ ಡರ್ ಡುಸೆನ್ ಕೂಡ ಔಟಾಗುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಕುಸಿತ ಆರಂಭವಾಯಿತು.
ಅದಾದ ಬಳಿಕ ಟೋನಿ ದೆ ಝೋರ್ಜಿ (28 ರನ್), ನಾಯಕ ಐಡೆನ್ ಮಾರ್ಕ್ರಾಮ್ (12) 39 ರನ್‌ಗಳ ಜೊತೆಯಾಟ ಆಡುವ ಮೂಲಕ ಆರಂಭಿಕ ಆಘಾತವನ್ನು ಎದುರಿಸಿದರು. ಆದರೆ, ಟೋನಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹೆನ್ರಿಕ್ ಕ್ಲಾಸೆನ್ ಕೇವಲ 6 ರನ್ ಗಳಿಸಿ ಔಟಾದರು.
ಡೇವಿಡ್ ಮಿಲ್ಲರ್ 2 ರನ್ ಗಳಿಸಿ ಔಟಾದರೆ, ನಾಯಕ ಮಾರ್ಕ್ರಾಮ್ 12 ರನ್ ಗಳಿಸಿ ಔಟಾದರು. ವಿಯಾನ್ ಮುಲ್ಡರ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ಆಂಡಿಲೆ ಫೆಲುಕ್ವಾಯೊ 33 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ 100 ರನ್‌ಗಳ ಗಡಿ ದಾಟಲು ಸಹಾಯ ಮಾಡಿದರು.
ಕೇಶವ್ ಮಹರಾಜ್ (4), ನಾಂದ್ರೆ ಬರ್ಗರ್ (7), ತಬ್ರೈಜ್ ಶಂಸಿ ಅಜೇಯ 11 ರನ್ ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 27.3 ಓವರ್ ಗಳಲ್ಲಿ 116 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಭಾರತಕ್ಕೆ ಸುಲಭ ಗುರಿ ನೀಡಿದೆ.
ಅರ್ಷದೀಪ್, ಆವೇಶ್ ಖಾನ್ ಮಿಂಚು
ಬುಮ್ರಾ, ಸಿರಾಜ್, ಶಮಿ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಅವಕಾಶ ಪಡೆದ ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಮಿಂಚು ಹರಿಸಿದರು. ಅರ್ಷದೀಪ್ ಸಿಂಗ್ 10 ಓವರ್ ಗಳಲ್ಲಿ 37 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಆವೇಶ್ ಖಾನ್ 8 ಓವರ್ ಗಳಲ್ಲಿ 27 ರನ್ ನೀಡಿ 4 ವಿಕೆಟ್ ಪಡೆದುಕೊಂಡರು. ಕುಲದೀಪ್ ಯಾದವ್ ಕೊನೆಯ ಒಂದು ವಿಕೆಟ್ ಪಡೆದರು.












Click it and Unblock the Notifications