Ind vs Pak : ಪಾಕಿಸ್ತಾನ ಆಟಗಾರರ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಉಧಯನಿಧಿ ಸ್ಟಾಲಿನ್ ಟೀಕೆ
ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಆಟಗಾರ ಮುಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ರೂಮ್‌ಗೆ ತೆರಳುತ್ತಿದ್ದಾಗ ಪ್ರೇಕ್ಷಕರು "ಜೈ ಶ್ರೀ ರಾಮ್" ಘೋಷಣೆಗಳನ್ನು ಕೂಗುವ ವಿಡಿಯೋಗಳು ವೈರಲ್ ಆದ ನಂತರ ಪ್ರತಿಕ್ರಿಯೆ ನೀಡಿರುವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಅಭಿಮಾನಿಗಳ ವರ್ತನೆಯನ್ನು ಟೀಕಿಸಿದ್ದು, ಇದು ಉತ್ತಮ ನಡೆಯಲ್ಲ ಎಂದಿದ್ದಾರೆ.
ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿದ್ದ X ನಲ್ಲಿ ಉದಯನಿಧಿ ಸ್ಟಾಲಿನ್, "ತನ್ನ ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಭಾರತವು ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಆದರೆ, ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಆಟಗಾರರ ಮುಂದೆ ಮಾಡಿದ್ದು ಸ್ವೀಕಾರಾರ್ಹ ವರ್ತನೆಯಲ್ಲ. ಕ್ರೀಡೆಗಳು ಎಲ್ಲಾ ಎಲ್ಲೆಯನ್ನು ಮೀರಿ ಏಕೀಕರಣಗೊಳ್ಳಬೇಕು. ಕ್ರೀಡೆಯನ್ನು ದೇಶಗಳ ನಿಜವಾದ ಸಹೋದರತ್ವವನ್ನು ಬೆಳೆಸಲು ಬಳಸಬೇಕು. ದ್ವೇಷವನ್ನು ಹರಡುವ ಸಾಧನವಾಗಿ ಬಳಸುವುದು ಖಂಡನೀಯ" ಎಂದು ಬರೆದಿದ್ದಾರೆ.

ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಮುಹಮ್ಮದ್ ರಿಜ್ವಾನ್ ಅವರು 69 ಎಸೆತಗಳಲ್ಲಿ 49 ರನ್ ಗಳಿಸಿ ಔಟಾದರು. ನಂತರ ಡ್ರೆಸ್ಸಿಂಗ್ ರೂಮಿಗೆ ಹಿಂತಿರುಗುತ್ತಿದ್ದಾಗ, ಪ್ರೇಕ್ಷಕರು ಅವರ ಮುಂದೆ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕ್ರಿಕೆಟ್ ಅಭಿಮಾನಿಗಳ ಈ ವರ್ತನೆಯನ್ನು ಖಂಡಿಸಿದ್ದು, ಇದೊಂದು 'ಅಸಂಬದ್ಧ ತಂತ್ರ' ಎಂದು ಟೀಕಿಸಿದ್ದಾರೆ.
ಪಾಡಿ ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು, "ಪಾಕಿಸ್ತಾನವು ಮುಂದಿನ 10 ದಿನಗಳಲ್ಲಿ ಚೆನ್ನೈನಲ್ಲಿ 2 ಪಂದ್ಯಗಳನ್ನು ಆಡುತ್ತಿದೆ. ಈ ಪಂದ್ಯಗಳ ವೇಳೆ ಅಲ್ಲಿಗೆ ತೆರಳುವ ಜನರು ಅವರನ್ನು (ಪಾಕ್ ತಂಡವನ್ನು) ಆತ್ಮೀಯವಾಗಿ ಸ್ವಾಗತಿಸಲು ಮರೆಯದಿರಿ. ಅವರು ಯಾರು ಮತ್ತು ಏನನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ನೋಡಿ ಅವರಿಗೆ ಗೌರವ ನೀಡಿ!" ಎಂದು ಬರೆದಿದ್ದಾರೆ.
ಟಾಸ್ ವೇಳೆಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಅವರ ಭಾಷಣದ ವೇಳೆಯೂ, ಅಭಿಮಾನಿಗಳು ಕಿರುಚಿದರು. ಈಮಧ್ಯೆ, ಭಾರತ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಅಜಮ್‌ಗೆ ಸಹಿ ಮಾಡಿದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.
ಈ ವರ್ಷದ ಆರಂಭದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು. ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಅಭಿಮಾನಿಗಳು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದರು.












Click it and Unblock the Notifications