Ind vs Eng: ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸೋಮವಾರ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದೆ, 2024ರ ಜನರಿಯಲ್ಲಿ ಈ ಟೆಸ್ಟ್ ಸರಣಿ ಆರಂಭವಾಗಲಿದೆ.
ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ಮೂವರು ಹೊಸ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಗಸ್ ಅಟ್ಕಿನ್ಸನ್, ಟಾಮ್ ಹಾರ್ಟ್ಲಿ ಮತ್ತು ಶೋಯೆಬ್ ಬಶೀರ್ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ಆಡಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಸರಣಿ ಪ್ರಮುಖವಾಗಲಿದೆ. 5 ಪಂದ್ಯಗಳ ಟೆಸ್ಟ್ ಸರಣಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಲಿದೆ. ಇಂಗ್ಲೆಂಡ್ ಸಹಜವಾಗಿಯೇ ಈ ಸರಣಿಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಲಿದೆ.

ಕ್ರಿಸ್ ವೋಕ್ಸ್, ವಿಲ್ ಜಾಕ್ಸ್, ಡ್ಯಾನ್ ಲಾರೆನ್ಸ್ ಮತ್ತು ಲಿಯಾಮ್ ಡಾಸನ್ ತಂಡದಿಂದ ಕೈಬಿಟ್ಟಿರುವ ಪ್ರಮುಖ ಆಟಗಾರರಾಗಿದ್ದಾರೆ. ಭಾರತದ ವಿರುದ್ಧ ಸರಣಿ ಆಗಿರುವ ಕಾರಣ ಇಂಗ್ಲೆಂಡ್ ತಂಡವು 16 ಸದಸ್ಯರ ತಂಡದಲ್ಲಿ 4 ಸ್ಪಿನ್ನರ್‌ಗಳನ್ನು ಸೇರಿಸಿದೆ. ಜ್ಯಾಕ್ ಲೀಚ್ ಮತ್ತು ಆಲಿ ಪೋಪ್ ಇಂಗ್ಲೆಂಡ್‌ನ ಟೆಸ್ಟ್ ತಂಡಕ್ಕೆ ಮರಳಿದ ಇತರ ಇಬ್ಬರು ಆಟಗಾರರು.
ಬೆನ್ ಸ್ಟೋಕ್ಸ್ ಫಿಟ್‌ನೆಸ್ ತಲೆನೋವು
ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್‌ಗೆ ಈಗ ಫಿಟ್ನೆಸ್ ಪ್ರಮುಖ ಪ್ರಶ್ನೆಯಾಗಿದೆ. ಇತ್ತೀಚೆಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬೆನ್ ಸ್ಟೋಕ್ಸ್ ಜನವರಿ 2024 ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಏಕದಿನ ವಿಶ್ವಕಪ್‌ನ ಮುಕ್ತಾಯದ ನಂತರ ಬೆನ್‌ಸ್ಟೋಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದರು. ಅವರು ಒಂದೆರಡು ವಾರಗಳ ಹಿಂದೆ ಲಂಡನ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಟೆಸ್ಟ್ ಸರಣಿ ಆರಂಭಕ್ಕೆ 1.5 ತಿಂಗಳುಗಳು ಉಳಿದಿರುವಾಗ, ಬೆನ್ ಸ್ಟೋಕ್ಸ್ ಅವರು ನಿರ್ಣಾಯಕ ಸರಣಿಗೆ ಫಿಟ್ ಆಗುತ್ತಾರ ಎನ್ನುವ ಪ್ರಶ್ನೆಗಳು ಮೂಡಿವೆ.
ಆಟದ ಒತ್ತಡದ ಹೊರೆ ಕಡಿಮೆ ಮಾಡಲು ಬೆನ್‌ಸ್ಟೋಕ್ಸ್ ಐಪಿಎಲ್ 2024 ರಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಬಿಡುಗಡೆ ಮಾಡಿದೆ. ಭಾರತದ ವಿರುದ್ಧದ ಟೆಸ್ಟ್ ಸರಣಿ ಬಳಿಕ ಸ್ಟೋಕ್ಸ್ 2024 ಟಿ20 ವಿಶ್ವಕಪ್‌ಗೆ ಸಜ್ಜಾಗಲಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಬೆನ್ ಸ್ಟೋಕ್ಸ್ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಪರಿಸ್ಥಿತಿಯ ಬಗ್ಗೆ ಅವರ ಅಭಿಮಾನಿಗಳಿಗೆ ತಿಳಿಸಲು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಜನವರಿ 25 ರಿಂದ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭವಾಗಲಿದೆ. 5 ಪಂದ್ಯಗಳ ಟೆಸ್ಟ್ ಸರಣಿ ಮಾರ್ಚ್ 11ರಂದು ಮುಕ್ತಾಯವಾಗಲಿದೆ. ಹೈದರಾಬಾದ್, ವಿಶಾಖಪಟ್ಟಣ, ರಾಜ್‌ಕೋಟ್, ರಾಂಚಿ ಮತ್ತು ಧರ್ಮಶಾಲಾದಲ್ಲಿ ಈ ಪಂದ್ಯಗಳು ನಡೆಯಲಿವೆ.
ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋ, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಆಲಿ ಪೋಪ್, ಆಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್.












Click it and Unblock the Notifications