Ind VS Aus: ಹೋಯ್ತು.. ಹೋಯ್ತು.. ಕರೆಂಟ್ ಹೋಯ್ತು... ಕ್ರಿಕೆಟ್ ಮ್ಯಾಚ್‌ನಲ್ಲಿ!
ಕ್ರಿಕೆಟ್ ಅಂದ್ರೆ ಅದು, ಇದು.. ಶ್ರೀಮಂತರ ಕ್ರೀಡೆ.. ಅಬ್ಬಬ್ಬಾ, ಎಷ್ಟೆಲ್ಲಾ ಹೊಗಳಿಕೆಗಳು ನಮ್ಮ ಕಿವಿಗೆ ಬೀಳುತ್ತವೆ. ಅದ್ರಲ್ಲೂ ಭಾರತದಲ್ಲಿ ಕ್ರಿಕೆಟ್ ಧರ್ಮವೇ ಆಗಿಹೋಗಿದೆ. ಹೀಗೆ ಕ್ರಿಕೆಟ್ ಪ್ಲೇಯರ್ ಆಗೋದ್ರೆ ಮನೆತುಂಬಾ ದುಡ್ಡು ತುಂಬಿಸಬಹುದು ಅನ್ನೋ ಕಲ್ಪನೆಯು ಇದೆ. ಆದ್ರೆ ಈ ಮಾತು ಇವತ್ತಿಗೆ ಸುಳ್ಳಾಗಬೇಕು, ಯಾಕೆ ಗೊತ್ತಾ? ಕರೆಂಟ್ ಬಿಲ್ ಕಟ್ಟಿಲ್ಲ ಅಂತಾ ಕ್ರಿಕೆಟ್ ಮೈದಾನದ ಕರೆಂಟ್ ಅನ್ನೇ ತೆಗೆದು ಹಾಕಲಾಗಿದೆ, ಅದು ಕ್ರಿಕೆಟ್ ದೇಶ ಭಾರತದಲ್ಲಿ!
ಹೌದು, ಭಾರತದ ಕ್ರಿಕೆಟ್ ಮಂಡಳಿ ಎಷ್ಟು ಬಲಿಷ್ಠವಾಗಿ ಬೆಳೆದಿದೆ ಅಂದ್ರೆ ಐಸಿಸಿ ಕೂಡ ಬಿಸಿಸಿಐ ಮಾತಿಗೆ ಎದುರು ವಾದಿಸೋದಿಲ್ಲ. ಹೀಗೆ ಭಾರತದ ಕ್ರಿಕೆಟ್ ಮಂಡಳಿ ಬಲವಾಗಿ ಬೆಳೆದಿದೆ. ಕೈಯಲ್ಲಿ ಹಣ ಕೂಡ ಚೆಲ್ಲಾಡುತ್ತಿದ್ದು, ಸಾವಿರಾರು ಕೋಟಿ ರೂಪಾಯಿ ಇದೆ. ಆದರೆ ಕ್ರಿಕೆಟ್ ಮೈದಾನ ಒಂದರ ಕರೆಂಟ್ ಬಿಲ್ ಕಟ್ಟೋದಕ್ಕೂ ಕಾಸು ಇಲ್ವಾ? ಅನ್ನೋ ಪ್ರಶ್ನೆ ಮೂಡುವುದು ಸಹಜ. ಈ ಮಾತಿಗೆ ಸಂಪೂರ್ಣ ಉತ್ತರ ಇಲ್ಲಿದೆ ಮುಂದೆ ಓದಿ.

ಕರೆಂಟ್ ಬಿಲ್ ಕಟ್ಟದ ಕ್ರಿಕೆಟ್ ಮೈದಾನ!
ಅಂದಹಾಗೆ ಭಾರತ & ಆಸ್ಟ್ರೇಲಿಯಾ ತಂಡಗಳ ನಡುವಿನ 4ನೇ ಟಿ20 ಕ್ರಿಕೆಟ್ ಪಂದ್ಯ ಇಂದು ನಡೆಯಲಿದೆ. ಹೀಗಾಗಿ ರಾಯಪುರ್ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ ಸಿದ್ಧತೆ ನಡೆಸಿದೆ. ಹೀಗಿದ್ದಾಗಲೇ ಕ್ರಿಕೆಟ್ ಮೈದಾನಕ್ಕೆ ಕರೆಂಟ್ ಶಾಕ್ ಸಿಕ್ಕಿದೆ. ಮಹತ್ವದ ಪಂದ್ಯ ನಡೆಯಲು ಕೆಲವೇ ಗಂಟೆಗಳು ಬಾಕಿಯಿದ್ದರೂ, ಕ್ರೀಡಾಂಗಣದಲ್ಲಿ ವಿದ್ಯುತ್ ಪೂರೈಕೆ ಬಂದ್ ಆಗೋಗಿದೆ. ಹಾಗಾದರೆ ಕ್ರಿಕೆಟ್ ಮೈದಾನಕ್ಕೆ ವಿದ್ಯುತ್ ಪೂರೈಕೆ ಕಟ್ ಆಗೋದಕ್ಕೆ ಕಾರಣ ಏನು?
14 ವರ್ಷದಿಂದ ಕರೆಂಟ್ ಬಿಲ್ ಕಟ್ಟಿಲ್ಲ!
ನೀವು ನಂಬುತ್ತಿರೋ ಇಲ್ವೋ ಗೊತ್ತಿಲ್ಲ, ಆದರೆ ಈ ಮಾತು ಸತ್ಯ. 2009 ರಿಂದ ವಿದ್ಯುತ್ ಬಾಕಿ ಪಾವತಿ ಮಾಡದೇ ಇರುವ ಕಾರಣ ರಾಯಪುರ್ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರಿಕೆಟ್ ಮೈದಾನ ಕರೆಂಟ್ ಕಟ್ ಆಗಿದೆ. ಈ ಕುರಿತಾಗಿ ಎನ್‌ಡಿಟಿವಿ ವರದಿ ಪ್ರಕಟಿಸಿದ್ದು, ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಕೈತುಂಬ ಕಾಸು ಇರುವ ನಮ್ಮ ಭಾರತದ ಕ್ರಿಕೆಟ್ ಮೈದಾನದ ಪರಿಸ್ಥಿತಿ ಯಾಕೆ ಹಿಂಗಾಯ್ತು? ಅನ್ನೋ ಪ್ರಶ್ನೆ ಕೂಡ ಈಗ ಮೂಡಿದೆ.

3.16 ಕೋಟಿ ಕರೆಂಟ್ ಬಿಲ್ ಬಾಕಿ!
ಒಂದು ಸಾವಿರ ಅಲ್ಲ ಎರಡು ಸಾವಿರ ಅಲ್ಲ ಬರೋಬ್ಬರಿ 3.16 ಕೋಟಿ ರೂಪಾಯಿಯನ್ನ ವಿದ್ಯುತ್ ಬಾಕಿಯಾಗಿ ಉಳಿಸಿಕೊಂಡಿದೆ ರಾಯಪುರ್ ಕ್ರಿಕೆಟ್ ಮೈದಾನ. 5 ವರ್ಷದ ಹಿಂದೆ ಈ ಕ್ರೀಡಾಂಗಣಕ್ಕೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿದೆ. ಛತ್ತೀಸ್‌ಗಢದ ರಾಜ್ಯ ಕ್ರಿಕೆಟ್ ಒಕ್ಕೂಟದ ಮನವಿ ಹಿನ್ನೆಲೆ ಕ್ರೀಡಾಂಗಣಕ್ಕೆ ತಾತ್ಕಾಲಿಕ ವಿದ್ಯುತ್ ಪೂರೈಕೆ ಒದಗಿಸಲಾಗಿದೆ. ಆದರೆ ಈ ವಿದ್ಯುತ್, ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್‌ಗೆ ಸಾಕಾಗಲಿದೆ. ಇಂದು ನಡೆಯಲಿರುವ ಪಂದ್ಯದ ವೇಳೆ ಜನರೇಟರ್ ನೆರವಿನಿಂದ ಹೊನಲು ಬೆಳಕಿನ ವ್ಯವಸ್ಥೆ ಮಾಡಬೇಕಾಗುತ್ತದೆ.
ಮ್ಯಾಚ್‌ಗೆ ಸಮಸ್ಯೆ ಗ್ಯಾರಂಟಿ?
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಯಪುರ್ ಅಧಿಕಾರಿ ಅಶೋಕ್ ಖಂಡೇಲ್ ವಾಲ್, ಕ್ರಿಕೆಟ್ ಒಕ್ಕೂಟ ಕಾರ್ಯದರ್ಶಿ ಕ್ರೀಡಾಂಗಣಕ್ಕೆ ಒದಗಿಸಿದ ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯ ಹೆಚ್ಚಳ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ. ಈ ಕ್ರೀಡಾಂಗಣದ ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವು 200 ಕೆವಿ ಇದ್ದು, 1000 ಕೆವಿಗೆ ಏರಿಕೆ ಮಾಡಬೇಕು ಎಂದು ಅರ್ಜಿಗೆ ಅನುಮೋದನೆ ನೀಡಲಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಇನ್ನೂ ಕೆಲಸ ಪ್ರಾರಂಭವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಪಂದ್ಯದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ ಅಂತಿವೆ ಮೂಲಗಳು.












Click it and Unblock the Notifications