Yuvraj Singh: ಯುವರಾಜ್ ಸಿಂಗ್ ಸತ್ತಿದ್ದರೂ ಹೆಮ್ಮೆಪಡುತ್ತಿದ್ದೆ ಎಂದ ತಂದೆ ಯೋಗರಾಜ್
2011ರ ಏಕದಿನ ವಿಶ್ವಕಪ್‌ನಲ್ಲಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೋರಾಟವನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ. ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದರೂ ಮೈದಾನದಲ್ಲಿ ಹಠ ಹಿಡಿದು ನಿಂತಿದ್ದ ಯುವಿ ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ನೆರವಾಗಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಯುವಿ ನೀಡಿದ ಹೋರಾಟವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯುವರಾಜ್ ಸಿಂಗ್, ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಪಂದ್ಯಾವಳಿ ಮುಗಿದ ಬಳಿಕ ಆರೋಗ್ಯ ತಪಾಸಣೆ ವೇಳೆಯಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮತ್ತೆ ಮೈದಾನಕ್ಕೆ ಮರಳಿದರೂ ಮೊದಲಿನಿಂತೆ ಅವರಿಗೆ ಅವಕಾಶಗಳು ಸಿಗಲಿಲ್ಲ.

2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲೂ ಯುವರಾಜ್ ಇದ್ದರು. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲೂ ಯುವಿ ಇದ್ದರು. ಬಳಿಕ ಯುವರಾಜ್ ಸಿಂಗ್ ವೃತ್ತಿಜೀವನ ಹಾಳಾಗಲೂ ಆಗಿನ ಭಾರತ ತಂಡದ ನಾಯಕರಾಗಿದ್ದ ಎಂಎಸ್ ಧೋನಿ ಕಾರಣ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಹಲವು ಬಾರಿ ಆರೋಪ ಮಾಡಿದ್ದಾರೆ.
ಈಗ 2011ರ ಏಕದಿನ ವಿಶ್ವಕಪ್ ಪಂದ್ಯಾವಳಿ ವೇಳೆ ತನ್ನ ಮಗ ಮೃತಪಟ್ಟಿದ್ದರೂ ನಾನು ಹೆಮ್ಮೆ ಪಡುತ್ತಿದ್ದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. "ಭಾರತಕ್ಕೆ ವಿಶ್ವಕಪ್ ಗೆದ್ದು ಯುವರಾಜ್ ಸಿಂಗ್ ಕ್ಯಾನ್ಸರ್ ನಿಂದ ನಿಧನರಾಗಿದ್ದರೂ ತಂದೆಯಾಗಿ ನಾನು ಹೆಮ್ಮೆಪಡುತ್ತಿದ್ದೆ. ಆತನ ಬಾಯಿಂದ ರಕ್ತ ಬರುತ್ತಿದ್ದರೂ ಆತ ಆಡಬೇಕು ಎಂದು ನಾನು ಬಯಸಿದ್ದೆ. ಚಿಂತೆ ಮಾಡಬೇಡ ನೀನು ಸಾಯುವುದಿಲ್ಲ, ಭಾರತಕ್ಕಾಗಿ ವಿಶ್ವಕಪ್ ಗೆದ್ದೆ ಎಂದು ನಾನು ಅವನಿಗೆ ಹೇಳಿದ್ದೆ." ಎಂದು ಯೋಗರಾಜ್ ಸಿಂಗ್ ಅನ್‌ಫಿಲ್ಟರ್ಡ್ ಬೈ ಸ್ಯಾಮ್‌ದಿಶ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.
ನನ್ನ ಹಾಗೆ ಕಷ್ಟಪಟ್ಟಿದ್ದರೆ
ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಫಿನಿಷರ್ ಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದರೂ, ಅವರ ತಂದೆ ಮಾತ್ರ ಮಗ ಇನ್ನಷ್ಟು ಕ್ರಿಕೆಟಿಗನಾಗಲು ಅವಕಾಶವಿತ್ತು ಎಂದು ಹೇಳಿದ್ದಾರೆ. "ಯುವರಾಜ್ ಸಿಂಗ್ ನನ್ನಂತೆ 10% ಕಷ್ಟ ಪಟ್ಟಿದ್ದರೂ ಅವನು ಇನ್ನಷ್ಟು ಉತ್ತಮ ಕ್ರಿಕೆಟಿಗನಾಗಿರುತ್ತಿದ್ದ" ಎಂದು ಯೋಗರಾಜ್ ಹೇಳಿದ್ದಾರೆ.
2011ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಯುವರಾಜ್ ಸಿಂಗ್ 90.50 ಸರಾಸರಿ ಮತ್ತು 86.19 ಸ್ಟ್ರೈಕ್‌ರೇಟ್‌ನಲ್ಲಿ 362 ರನ್ ಗಳಿಸಿದ್ದರು. ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಬಳಿಕ ಹಲವು ವರ್ಷಗಳವರೆಗೆ ಭಾರತ ತಂಡದಲ್ಲಿ ಕೆಲವು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರು. 2019ರಲ್ಲಿ ಅವರು ನಿವೃತ್ತಿ ಘೋಷಣೆ ಮಾಡಿದರು.












Click it and Unblock the Notifications