Harmanpreet Kaur: ಟೀಮ್ ಇಂಡಿಯಾ ನಾಯಕತ್ವದ ಸ್ಥಾನದಿಂದ ದಿಢೀರ್ ಕೆಳಗಿಳಿದ ಹರ್ಮನ್ಪ್ರೀತ್ ಕೌರ್.. ಮುಂದಿನ ಕ್ಯಾಪ್ಟನ್ ಯಾರು?
Harmanpreet Kaur: ಭಾರತ ಮಹಿಳಾ ಕ್ರಿಕೆಟ್ ತಂಡದ ಯಶಸ್ವಿ ನಾಯಕಿ ಹಾಗೂ ಅನುಭವಿ ಆಟಗಾರ್ತಿ ಹರ್ಮನ್ಪ್ರೀತ್ ಕೌರ್ ಅವರು ಇಂದು (ಅಕ್ಟೋಬರ್ 06) ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. 2025ರ ಮಹಿಳಾ ಏಕದಿನ ವಿಶ್ವಕಪ್ ಸರಣಿಯಲ್ಲಿ ಭಾರತಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವ ಮೂಲಕ ಇತಿಹಾಸ ಬರೆದಿದ್ದ ಇವರು, ಇತ್ತೀಚೆಗೆ ಮುಕ್ತಾಯಗೊಂಡ 2026ರ ಏಷ್ಯನ್ ಗೇಮ್ಸ್ನಲ್ಲೂ ತಂಡವನ್ನು ಮುನ್ನಡೆಸಿ ಸ್ವರ್ಣ ಪದಕ ಗೆಲ್ಲಿಸಿದ್ದರು. ತಮ್ಮ ಚಾಣಾಕ್ಷ ನಾಯಕತ್ವದಿಂದ ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದನ್ನಾಗಿ ರೂಪಿಸಿದ ಕೀರ್ತಿ ಇವರದ್ದಾಗಿದೆ.

ದಿಢೀರ್ ಈ ತೀರ್ಮಾನಕ್ಕೆ ಕಾರಣವೇನು?
ಹೊಸಬರಿಗೆ ನಾಯಕತ್ವ ವಹಿಸಿಕೊಳ್ಳಲು ಸೂಕ್ತ ಅವಕಾಶ ಮಾಡಿಕೊಡುವುದು ಮತ್ತು ತಮ್ಮ ಸ್ವಂತ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸುವುದು ಈ ನಿರ್ಧಾರದ ಮುಖ್ಯ ಉದ್ದೇಶ ಎನ್ನಲಾಗಿದೆ. ಇನ್ನೂ ಇದೀಗ ಅವರು ನಾಯಕತ್ವದ ಹೊಣೆ ಇಲ್ಲದಿದ್ದರೂ, ಮುಂಬರುವ ಕ್ರಿಕೆಟ್ ಸರಣಿಗಳಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡುವುದಾಗಿ ಅವರು ನಿರ್ಧರಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಲಕ್ಷಾಂತರ ಅಭಿಮಾನಿಗಳು ಹರ್ಮನ್ಪ್ರೀತ್ ಅವರ ಅಪಾರ ಕೊಡುಗೆಯನ್ನು ಸ್ಮರಿಸಿದ್ದಾರೆ. ತಮ್ಮ ನಾಯಕತ್ವದ ಅವಧಿಯಲ್ಲಿ ಭಾರತ ತಂಡಕ್ಕೆ ಸತತ ಯಶಸ್ಸು, ಸಾಲು ಸಾಲು ವಿದೇಶಿ ಸರಣಿ ಗೆಲುವು ಹಾಗೂ ಪ್ರಮುಖ ಐಸಿಸಿ ಟ್ರೋಫಿಗಳನ್ನು ತಂದುಕೊಟ್ಟಿದ್ದಕ್ಕಾಗಿ ಬಿಸಿಸಿಐ ಅವರಿಗೆ ಧನ್ಯವಾದ ತಿಳಿಸಿದೆ.
ಟೀಮ್ ಇಂಡಿಯಾದ ಮುಂದಿನ ನಾಯಕಿ ಯಾರು?
ಹರ್ಮನ್ಪ್ರೀತ್ ಕೌರ್ ಅವರ ಈ ದಿಢೀರ್ ನಿರ್ಧಾರದಿಂದಾಗಿ ಭಾರತ ಮಹಿಳಾ ತಂಡದ ಮುಂದಿನ ನಾಯಕಿ ಯಾರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಸದ್ಯ ಉಪನಾಯಕಿಯಾಗಿರುವ ಸ್ಮೃತಿ ಮಂಧನಾ ಅವರಿಗೆ ನಾಯಕತ್ವದ ಜವಾಬ್ದಾರಿ ಹಸ್ತಾಂತರವಾಗುವ ಸಾಧ್ಯತೆಗಳಿದ್ದು, ಬಿಸಿಸಿಐ ಶೀಘ್ರದಲ್ಲೇ ಹೊಸ ನಾಯಕಿಯ ಹೆಸರನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಹರ್ಮನ್ಪ್ರೀತ್ ಕೌರ್ ಸಂದೇಶದಲ್ಲಿ ಏನಿದೆ?
ಸಾಮಾಜಿಕ ಜಾಲತಾಣದಲ್ಲಿ 37 ವರ್ಷದ ಹರ್ಮನ್ಪ್ರೀತ್ ಕೌರ್ ಅವರು ಈ ಕುರಿತು ಮಹತ್ವದ ಸಂದೇಶವನ್ನು ಹಂಚಿಕೊಂಡಿದ್ದಾರೆ. 'ಇಂದು ನಾನು ಭಾರತ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳುವುದು ನನಗೆ ಸುಲಭವಾಗಿರಲಿಲ್ಲ. ಇದರ ಹಿಂದೆ ಹಲವು ವರ್ಷಗಳ ನೆನಪುಗಳು, ತ್ಯಾಗ ಮತ್ತು ಭಾವುಕ ಕ್ಷಣಗಳಿವೆ,' ಎಂದು ಹೇಳಿದ್ದಾರೆ.
'ತಂಡದ ಏಳಿಗೆಗಾಗಿ ನಾನು ನನ್ನ ಬೆವರು ಹರಿಸಿದ್ದೇನೆ, ಸಮಯ ಹಾಗೂ ಹಲವು ಬಾರಿ ನನ್ನ ವೈಯಕ್ತಿಕ ಸಾಧನೆ ಮತ್ತು ಆಕಾಂಕ್ಷೆಗಳನ್ನು ಬದಿಗಿಟ್ಟಿದ್ದೇನೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಟೀಕೆಗಳನ್ನು ಎದುರಿಸಿದ್ದೇನೆ. ಕಷ್ಟದ ದಿನಗಳು ಹಾಗೂ ಸೋಲುಗಳನ್ನು ನೋಡಿದ್ದೇನೆ. ಅದೇ ರೀತಿ ದೇಶಕ್ಕೆ ಹೆಮ್ಮೆ ತಂದ ಅತ್ಯುನ್ನತ ಕ್ಷಣಗಳನ್ನು ಆನಂದಿಸಿದ್ದೇನೆ. ಈಗ ನನ್ನ ಕರ್ತವ್ಯ ಮುಗಿದಿದೆ ಎಂಬ ತೃಪ್ತಿ ನನಗಿದೆ,' ಎಂದು ಅವರು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಹತ್ತು ವರ್ಷಗಳ ನಾಯಕತ್ವದ ಪಯಣ
* ಟಿ20 ಕ್ರಿಕೆಟ್: 2016ರಲ್ಲಿ ಮೊದಲ ಬಾರಿಗೆ ಟಿ20 ನಾಯಕಿಯಾಗಿದ್ದ ಹರ್ಮನ್ಪ್ರೀತ್, 10 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದರು.
* ಏಕದಿನ ಹಾಗೂ ಟೆಸ್ಟ್: 2022ರಲ್ಲಿ ಏಕದಿನ ಹಾಗೂ 2023ರಲ್ಲಿ ಮೂರೂ ಮಾದರಿಯ ಪೂರ್ಣಪ್ರಮಾಣದ ನಾಯಕಿಯಾಗಿ ಆಯ್ಕೆಯಾಗಿದ್ದರು.
ಹರ್ಮನ್ಪ್ರೀತ್ ಕೌರ್ ಸಾಧನೆ
ಇವರ ನಾಯಕತ್ವದಲ್ಲೇ ಭಾರತ ಮಹಿಳಾ ತಂಡವು ಕಳೆದ ವರ್ಷ ಮೊದಲ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. ಅಷ್ಟೇ ಅಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ನಲ್ಲೂ ಸತತ ಎರಡನೇ ಬಾರಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿತ್ತು.


Click it and Unblock the Notifications
