Champions Trophy: ಏಕದಿನ ತಂಡಕ್ಕೂ ನಾಯಕ ಬದಲಾವಣೆ! ರೋಹಿತ್ ಬದಲಾಗಿ ಈತನಿಗೆ ನಾಯಕತ್ವ?
ನಿರೀಕ್ಷೆ ಮಾಡಿದಂತೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಬೆಂಚ್ ಕಾಯುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿಕೊಂಡಿದ್ದು, ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಮತ್ತೆ ಅವಕಾಶ ಪಡೆಯುತ್ತಾರಾ ಇಲ್ಲವಾ ಎನ್ನುವ ಪ್ರಶ್ನೆ ಎದುರಾಗಿದೆ. ಈ ಬೆನ್ನಲ್ಲೇ ರೋಹಿತ್ ಶರ್ಮಾಗೆ ಮತ್ತೊಂದು ಶಾಕ್ ನೀಡಲು ಬಿಸಿಸಿಐ ಸಜ್ಜಾಗಿದೆ ಎನ್ನಲಾಗಿದೆ.
ಮೈಖೇಲ್ ಇಂಗ್ಲಿಷ್ ವರದಿ ಮಾಡಿರುವ ಪ್ರಕಾರ, ಬಿಸಿಸಿಐ ಈಗಾಗಲೇ ಏಕದಿನ ತಂಡಕ್ಕೆ ನಾಯಕನ ಹುಡುಕಾಟದಲ್ಲಿದೆ ಎಂದು ಹೇಳಿದೆ. 37 ವರ್ಷದ ರೋಹಿತ್ ಶರ್ಮಾ ಇನ್ನೆಷ್ಟು ದಿನ ಕ್ರಿಕೆಟ್ ಆಡುತ್ತಾರೆ ಗೊತ್ತಿಲ್ಲ, ಇತ್ತಿಚಿನ ದಿನಗಳಲ್ಲಿ ರೋಹಿತ್ ಪ್ರದರ್ಶನ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ, ಇದೇ ಕಾರಣಕ್ಕೆ 2025ರ ಫೆಬ್ರವರಿ ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಹೊಸ ನಾಯಕನ ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ ಯೋಚಿಸಲಾಗುತ್ತಿದೆ.

ಹಾರ್ದಿಕ್ ಪಾಂಡ್ಯಾಗೆ ನಾಯಕತ್ವ?
ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ನಾಯಕರಾಗಿದ್ದರು. ಬಳಿಕ ಸೂರ್ಯಕುಮಾರ್ ಯಾದವ್ ಅವರಿಗೆ ಟಿ20 ತಂಡದ ನಾಯಕತ್ವ ನೀಡಲಾಗಿದೆ. ಸೂರ್ಯ ಸಾರಥ್ಯದಲ್ಲಿ ಭಾರತ ಟಿ20 ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಸೂರ್ಯ ಟಿ20 ಮಾದರಿಯಲ್ಲಿ ನಾಯಕರಾಗಿ ಮುಂದುವರೆಯಲಿದ್ದಾರೆ.
ಏಕದಿನ ಮಾದರಿಗೆ ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ಮಾಡುವ ಬಗ್ಗೆ ಬಿಸಿಸಿಐ ಯೋಚಿಸುತ್ತಿದೆ ಎಂದು ಹೇಳಲಾಗಿದೆ. ಆಲ್‌ರೌಂಡರ್ ಆಗಿ ಮಿಂಚಿರುವ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಪಾಂಡ್ಯ ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದು ಫಿಟ್ ಆಗಿದ್ದಾರೆ.
ರೋಹಿತ್ ಶರ್ಮಾ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ನಲ್ಲೂ ವಿಫಲವಾಗುತ್ತಿದ್ದು ಫಾರ್ಮ್‌ನಲ್ಲಿರುವ ಆಟಗಾರರಿಗೆ ಮಣೆ ಹಾಕಲು ಬಿಸಿಸಿಐ ನಿರ್ಧರಿಸಿದೆ. ವಿರಾಟ್ ಕೊಹ್ಲಿ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು ಬಾರ್ಡರ್ ಗವಾಸ್ಕರ್ ಟ್ರೋಫಿ ಬಳಿಕ ಬಿಸಿಸಿಐ ಕೊಹ್ಲಿ ಜೊತೆ ಚರ್ಚೆ ನಡೆಸಲಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮುನ್ನ ಭಾರತ ಇಂಗ್ಲೆಂಡ್ ವಿರುದ್ಧ 5 ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದ್ದು. ಏಕದಿನ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್‌ಗೆ ಆಡುವಂತೆ ಕೇಳಬಹುದು. ಈ ಸರಣಿಯಲ್ಲಿ ಇಬ್ಬರು ವಿಫಲವಾದರೆ ಇಬ್ಬರನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಿಂದ ಹೊರಗಿಡುವ ಬಗ್ಗೆ ಬಿಸಿಸಿಐ ಆಯ್ಕೆದಾರರು ಯೋಚಿಸಬಹುದು.
ಅಥವಾ ಇಬ್ಬರಿಗೂ ಕೊನೆಯ ಅವಕಾಶ ನೀಡಿ ಚಾಂಪಿಯನ್ಸ್ ಟ್ರೋಫಿ ಬಳಿಕ ಇಬ್ಬರಿಗೂ ನಿವೃತ್ತಿ ಘೋಷಿಸಲು ಕೇಳಬಹುದು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಕೊಹ್ಲಿ ಪದೇ ಪದೇ ತಪ್ಪಿನಿಂದ ವಿಕೆಟ್ ಒಪ್ಪಿಸುತ್ತಿರುವುದು ಟೀಕೆಗೆ ಗುರಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಲು ಫೆಬ್ರವರಿ 13ರವರೆಗೂ ಸಮಯವಿದ್ದು, ಬಿಸಿಸಿಐ ಕೊನೆಯ ಕ್ಷಣದಲ್ಲಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.












Click it and Unblock the Notifications