GT vs KKR: ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಕನಸಿಗೆ ಅಡ್ಡಿಯಾದ ಮಳೆ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿದ ನಂತರ ಗುಜರಾತ್ ಟೈಟಾನ್ಸ್ ಐಪಿಎಲ್ 2024 ರ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ಗುಜರಾತ್ ಟೈಟಾನ್ಸ್ ಈಗ 13 ಪಂದ್ಯಗಳಿಂದ 11 ಅಂಕಗಳನ್ನು ಹೊಂದಿದ್ದು ಅವರು ಗರಿಷ್ಠ 13 ಅಂಕಗಳನ್ನು ಮಾತ್ರ ಹೊಂದಬಹುದಾಗಿದೆ. ಇದರಿಂದಾಗಿ ಶುಭಮನ್ ಗಿಲ್ ಪಡೆಯ ಪ್ಲೇಆಫ್ ಕನಸು ಕಮರಿಹೋಗಿದೆ.
ಮತ್ತೊಂದೆಡೆ ಕೆಕೆಆರ್ 19 ಅಂಕಗಳನ್ನು ಹೊಂದಿದ್ದು ಮುಂದಿನ ಪಂದ್ಯಗಳಲ್ಲಿ ಸೋತರೂ ಟಾಪ್ 2 ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ಭಾರಿ ಗುಡುಗು, ಮಿಂಚಿನ ಜೊತೆಗೆ ಬಿರುಗಾಳಿ ಇದ್ದ ಕಾರಣ ಟಾಸ್ ಅನ್ನು ಮುಂದೂಡಲಾಗಿತ್ತು. ಆದರೆ ಬಳಿಕ ಮಳೆ ಆರಂಭವಾದ ಕಾರಣ, ಟಾಸ್ ನಡೆಯಲು ಅವಕಾಶ ಸಿಗಲೇ ಇಲ್ಲ. 10.15ರ ವೇಳೆಗೆ ಮಳೆ ನಿಂತ ಬಳಿಕ 10.45ಕ್ಕೆ ಟಾಸ್ ಎಂದು ಹೇಳಲಾಗಿತ್ತಾದರೂ, ಮತ್ತೆ ಮಳೆ ಶುರುವಾದ ಬಳಿಕ ಪಂದ್ಯವನ್ನು ರದ್ದು ಮಾಡಲಾಯಿತು. ಇದರಿಂದ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆ ಮಾಡಲಾಯಿತು.
ಮೊದಲ ಬಾರಿ ಪ್ಲೇಆಫ್‌ಗೆ ಮುನ್ನವೇ ಗುಜರಾತ್ ಟೈಟಾನ್ಸ್ ಐಪಿಎಲ್ ಪಂದ್ಯಾವಳಿಯಿಂದ ಹೊರಬಿದ್ದಿದೆ. ಮೊದಲ ಆವೃತ್ತಿಯಲ್ಲೇ ಐಪಿಎಲ್ 2022ರಲ್ಲಿ ಚಾಂಪಿಯನ್ ಆಗಿದ್ದ ಗುಜರಾತ್ ಟೈಟಾನ್ಸ್ ಬಳಿಕ ಕಳೆದ ಆವೃತ್ತಿಯಲ್ಲಿ ಫೈನಲ್ ತಲುಪಿತ್ತು. ಆದರೆ ಫೈನಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಸೋತ ಬಳಿಕ ರನ್ನರ್ ಅಪ್ ಆಗಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋತಿದ್ದು ತಂಡಕ್ಕೆ ಭಾರಿ ಹಿನ್ನಡೆಯಾಗಿತ್ತು. ಕಳೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಗುಜರಾತ್, ಇಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿತ್ತು, ಆದರೆ ಮಳೆ ಅವರ ಕನಸಿಗೆ ಆಸ್ಪದ ಕೊಡಲೇ ಇಲ್ಲ.
ಸನ್‌ರೈಸರ್ಸ್ ವಿರುದ್ಧ ಪಂದ್ಯ
ಮೇ 16ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ಈ ಆವೃತ್ತಿಯ ತಮ್ಮ ಕೊನೆಯ ಪಂದ್ಯ ಆಡಲಿದ್ದಾರೆ. ಆ ಪಂದ್ಯವನ್ನು ಗೆಲ್ಲುವ ಮೂಲಕ ಈ ಆವೃತ್ತಿಗೆ ವಿದಾಯ ಹೇಳುವ ಉತ್ಸಾಹದಲ್ಲಿದೆ ಗಿಲ್ ಪಡೆ.












Click it and Unblock the Notifications