Vinay Kumar: ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಭಾರತ ತಂಡದ ಬೌಲಿಂಗ್ ಕೋಚ್?
ರಾಹುಲ್ ದ್ರಾವಿಡ್ ಅವರ ಭಾರತ ತಂಡದ ಮುಖ್ಯ ಕೋಚ್ ಅವಧಿ ಮುಕ್ತಾಯವಾಗಿದ್ದು, ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್‌ಶಾ ಗಂಭೀರ್ ಮುಂದಿನ ಭಾರತ ತಂಡದ ಮುಖ್ಯ ಕೋಚ್ ಎಂದು ಘೋಷಣೆ ಮಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಜೊತೆಯಿದ್ದ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಅವರ ಅವಧಿ ಕೂಡ ಮುಕ್ತಾಯವಾಗಿದ್ದು, ಭಾರತ ತಂಡಕ್ಕೆ ಶೀಘ್ರದಲ್ಲೇ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ನೇಮಕವಾಗಲಿದ್ದಾರೆ.

ಮುಖ್ಯ ಕೋಚ್ ಆಗಿ ನೇಮಕವಾಗಿರುವ ಗೌತಮ್ ಗಂಭೀರ್ ತಮ್ಮ ಕೋಚ್ ಸಿಬ್ಬಂದಿ ಬಗ್ಗೆ ಬಿಸಿಸಿಐ ಬಳಿ ವಿಶೇಷ ಬೇಡಿಕೆ ಇಟ್ಟಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಇವರೇ ಬೇಕು ಎಂದು ಕೇಳಿದ್ದಾರೆ ಎಂದು ವರದಿಯಾಗಿದೆ.
ಬೌಲಿಂಗ್ ಕೋಚ್ ಆಗಿ ಕನ್ನಡಿಗ?
ವರದಿಗಳ ಪ್ರಕಾರ ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಮತ್ತು ಬೌಲಿಂಗ್ ಕೋಚ್ ಆಗಿ ವಿನಯ್ ಕುಮಾರ್ ಬೇಕು ಎಂದು ಗಂಭೀರ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಶೀಘ್ರದಲ್ಲೇ ಕೋಚಿಂಗ್ ಸಹಾಯಕ ಸಿಬ್ಬಂದಿ ನೇಮಕ ಮಾಡಲು ಅರ್ಜಿ ಆಹ್ವಾನಿಸಲಿದೆ.
ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಪ್ರಸಿದ್ಧವಾಗಿರುವ ಭಾರತ ತಂಡದ ಮಾಜಿ ಆಟಗಾರ ಬೌಲಿಂಗ್ ಕೋಚ್ ಆಗುತ್ತಾರೆ ಎನ್ನಲಾಗಿದೆ. 40 ವರ್ಷದ ವಿನಯ್ ಕುಮಾರ್ ಅವರಿಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಟೂರ್ನಿಯಲ್ಲಿ ಆಡಿರುವ ಅಪಾರ ಅನುಭವ ಇದೆ. ಮುಖ್ಯವಾಗಿ ಕೆಕೆಆರ್ ತಂಡದಲ್ಲಿ ಗಂಭೀರ್ ನಾಯಕರಾಗಿದ್ದ ಅವಧಿಯಲ್ಲಿ ವಿನಯ್ ಕುಮಾರ್ ಮುಖ್ಯ ಬೌಲರ್ ಆಗಿದ್ದರು. ಹೀಗಾಗಿ ವಿನಯ್ ಕುಮಾರ್ ಬಗ್ಗೆ ಗಂಭೀರ್ ಅವರಿಗೆ ಚನ್ನಾಗಿ ಗೊತ್ತಿದೆ.
ಭಾರತ ತಂಡಕ್ಕಾಗಿ ವಿನಯ್ ಕುಮಾರ್ 1 ಟೆಸ್ಟ್, 31 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ. 105 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ಅನುಭವ ಇದೆ. ಅವರ ನಾಯಕತ್ವದಲ್ಲಿ ಕರ್ನಾಟಕ ಎರಡು ಬಾರಿ ರಣಜಿ ಟ್ರೋಫಿ ಗೆದ್ದಿದೆ. 139 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು 504 ವಿಕೆಟ್ ಪಡೆದಿದ್ದಾರೆ.
ಅಭಿಷೇಕ್ ನಾಯರ್ ಬ್ಯಾಟಿಂಗ್ ಕೋಚ್?
ಮುಂಬೈ ಮೂಲಕ ಅಭಿಷೇಕ್ ನಾಯರ್ ಬ್ಯಾಟಿಂಗ್ ಕೋಚ್ ಆಗಲಿ ಎಂದು ಗಂಭೀರ್ ಕೇಳಿದ್ದಾರೆ ಎನ್ನಲಾಗಿದೆ. 103 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಅಭಿಷೇಕ್ ನಾಯರ್, 5749 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಅವರ ಸ್ನೇಹಿತ ಕೂಡ ಆಗಿದ್ದು, ತಂಡಕ್ಕೆ ಅವರು ಬ್ಯಾಟಿಂಗ್ ಕೋಚ್ ಆದರೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications