RCB Team: ಆಟಗಾರರನ್ನಲ್ಲ ಮೊದಲು ಇವರನ್ನು ಬದಲಾಯಿಸಿ; ಆರ್‌ಸಿಬಿಗೆ ದೊಡ್ಡ ಗಣೇಶ್ ಸಲಹೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿರುವ ಆರ್‌ಸಿಬಿ 5 ಪಂದ್ಯಗಳಲ್ಲಿ ಸೋಲು ಕಂಡಿದೆ.
ತಂಡದಲ್ಲಿ ಯಾವುದು ಹೊಂದಾಣಿಕೆ ಆಗುತ್ತಿಲ್ಲ, ಕೊಹ್ಲಿ ಒಬ್ಬರನ್ನು ಬಿಟ್ಟರೆ ಮಿಕ್ಕ ಆಟಗಾರರಿಂದ ದೊಡ್ಡ ರನ್ ಬಂದಿಲ್ಲ. ದಿನೇಶ್ ಕಾರ್ತಿಕ್ ಮಾತ್ರ ಉತ್ತಮ ಲಯದಲ್ಲಿದ್ದರೂ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ದಿನೇಶ್ ಕಾರ್ತಿಕ್, ಪಾಫ್ ಡುಪ್ಲೆಸಿಸ್, ರಜತ್ ಪಟಿದಾರ್ ಅರ್ಧಶತಕ ಗಳಿಸಿದರೆ, ಉಳಿದ ಬ್ಯಾಟರ್ ಗಳು ಒಂದಂಕಿಗೆ ಔಟಾದರು.

ಬೌಲಿಂಗ್ ವಿಭಾಗ ಆರ್‌ಸಿಬಿ ತಂಡದ ದೊಡ್ಡ ಸಮಸ್ಯೆ, ಈವರೆಗೂ ಆರ್‌ಸಿಬಿ ಯಾಕೆ ಕಪ್ ಗೆದ್ದಿಲ್ಲ ಎಂದರೆ ಮೊದಲು ಬರುವ ದೊಡ್ಡ ಉತ್ತರ ಆರ್‌ಸಿಬಿ ಬೌಲಿಂಗ್ ಕಳಪೆಯಾಗಿದೆ ಎನ್ನುವುದು. ಈ ಬಾರಿ ತಂಡದ ಪ್ರದರ್ಶನ ಕಂಡು ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಕೌಟ್ ಬದಲಾಯಿಸಿ ಎಂದ ದೊಡ್ಡ ಗಣೇಶ್
ಕರ್ನಾಟಕದವರೇ ಆದ, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಕೂಡ ಆರ್‌ಸಿಬಿ ಕಳಪೆ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ್ದು, ಮೊದಲ ತಂಡದ ಟ್ಯಾಲೆಂಟ್ ಸ್ಕೌಟ್ ಅನ್ನು ಬದಲಾವಣೆ ಮಾಡಬೇಕು ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯಹಂಚಿಕೊಂಡಿರುವ ಅವರು, ಆರ್‌ಸಿಬಿ ಮೊದಲು ತನ್ನ ಟ್ಯಾಲೆಂಟ್ ಸ್ಕೌಟ್ ಅನ್ನು ಸರಿಪಡಿಸಬೇಕು, ತಂಡದ ಪ್ರದರ್ಶನ ಅದಾಗೆ ಸುಧಾರಣೆಯಾಗುತ್ತದೆ ಎಂದು ಹೇಳಿದ್ದಾರೆ.
ಅವರ ಟ್ವೀಟ್‌ಗೆ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಕುರುಡರನ್ನು ಕುರುಡರೇ ಮುನ್ನಡೆಸುವಂತಿದೆ. ಕೆಎಲ್ ರಾಹುಲ್, ಪಡಿಕ್ಕಲ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಟೆ, ಪ್ರಸಿದ್ಧ್ ಕೃಷ್ಣ ಅವರು ಹೆಚ್ಚಿನ ಮೊತ್ತಕ್ಕೆ ಹರಾಜಾಗಿದ್ದರಿಂದ ಅವರನ್ನು ಕೈಬಿಟ್ಟರೂ, ಶ್ರೇಯಸ್ ಗೋಪಾಲ್ ಅವರ ಬಗ್ಗೆ ಯಾವ ಕಾರಣ ಕೊಡುತ್ತಾರೆ? ವಯಸ್ಸಾದ ಕರ್ಣ್ ಶರ್ಮಾ ಅವರಿಗಿಂತ ಗೋಪಾಲ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದಿತ್ತು. ಇವರು ಕೊನೆಯದಾಗಿ ಹುಡುಕಿದ ಭಾರತದ ಅತ್ಯುತ್ತಮ ಆಟಗಾರ ಯಾರು? ಎಂದು ಕಿಡಿ ಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೊಡ್ಡ ಗಣೇಶ್, ಅಂತರಾಷ್ಟ್ರೀಯ/ದೇಶೀಯ ಎರಡೂ ಕರ್ನಾಟಕದ ಆಟಗಾರರನ್ನು ಸೆಳೆಯುವ ಪ್ರಯತ್ನವನ್ನೂ ಮಾಡದಿರುವುದು ನನಗೆ ಬೇಸರ ತಂದಿದೆ. ಹತ್ತು ವರ್ಷಗಳಿಂದಲೂ ಅವರು ಇದನ್ನೇ ಮಾಡುತ್ತಿದ್ದಾರೆ, ಬೇಕಂತಲೇ ಅವರು ಕರ್ನಾಟಕದ ಆಟಗಾರರನ್ನು ಕಡೆಗಣಿಸುತ್ತಿದ್ದಾರೆ ಎಂದು ನನಗೆ ಈಗ ಅರ್ಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications