Pakistan: ಮುಂದಿನ ವಿಮಾನಕ್ಕೆ ವಾಪಸ್ ಬನ್ನಿ! ಪಾಕಿಸ್ತಾನ ತಂಡಕ್ಕೆ ಅಭಿಮಾನಿಗಳ ಆಗ್ರಹ
ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಸೋಲಿನ ಅಭಿಯಾನ ಮುಂದುವರೆದಿದೆ. ಅಕ್ಟೋಬರ್ 14ರಂದು ಭಾರತದ ವಿರುದ್ಧ ಸೋತ ಬಳಿಕ ಪಾಕಿಸ್ತಾನ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ, ಸೋಮವಾರ ಅಫ್ಘಾನಿಸ್ತಾನದ ವಿರುದ್ಧ ಕೂಡ ಸೋತಿದ್ದು ಪಾಕಿಸ್ತಾನದ ಅಭಿಮಾನಿಗಳನ್ನು ಕೆರಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡರು. ಮುಂದಿನ ವಿಮಾನದಲ್ಲೇ ವಾಪಸ್ ಬನ್ನಿ ಎಂದು ತಮ್ಮ ತಂಡಕ್ಕೆ ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೂಡ ಬಾಬರ್ ಪಡೆಯ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಪಾಕಿಸ್ತಾನ ತಂಡದ ಫೀಲ್ಡಿಂಗ್ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಆಟಗಾರರ ಫಿಟ್ನೆಸ್ ಬಗ್ಗೆ ಟೀಕೆ ಮಾಡಿದ್ದಾರೆ.
ಮೋಯಿನಾ ಖಾನ್ ಕೂಡ ಪಾಕಿಸ್ತಾನದ ಬೇಜವಬ್ದಾರಿ ಆಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಅದರಲ್ಲೂ ಪಾಕಿಸ್ತಾನದ ಫೀಲ್ಡಿಂಗ್ ಬಗ್ಗೆ ಭಾರೀ ಟೀಕೆ ಮಾಡಿದ್ದು, ಕೆಟ್ಟ ಫೀಲ್ಡಿಂಗ್‌ನಿಂದ ತಂಡಕ್ಕೆ ಹಿನ್ನಡೆಯಾಗಿದೆ ಎಂದರು.
ಮೊದಲ ಬಾರಿಗೆ ಸೋಲು
ಐಸಿಸಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ 8 ಬಾರಿ ಅಫ್ಘಾನಿಸ್ತಾನದ ವಿರುದ್ಧ ಮುಖಾಮುಖಿಯಾಗಿದ್ದು, 7 ಬಾರಿ ಪಾಕಿಸ್ತಾನ ಗೆದ್ದಿತ್ತು, 8ನೇ ಬಾರಿ ಗೆಲ್ಲುವ ಪಾಕಿಸ್ತಾನದ ಕನಸು ಭಂಗವಾಗಿದ್ದು, ಅಫ್ಘಾನಿಸ್ತಾನ ತಿರುಗಿ ಬಿದ್ದಿತು. ಅದ್ಭುತ ಆಟವಾಡಿದ ಅಫ್ಘನ್ ಪಡೆ 8 ವಿಕೆಟ್‌ಗಳ ಗೆಲುವು ಸಾಧಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಪಾಕಿಸ್ತಾನ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತಂಡ ವಿಶ್ವಕಪ್‌ನಲ್ಲಿ ಆಡಲು ಅರ್ಹವಲ್ಲ, ಮುಂದಿನ ಪಂದ್ಯಗಳನ್ನು ಆಡಬೇಡಿ ಪಾಕಿಸ್ತಾನಕ್ಕೆ ವಾಪಸ್ ಬನ್ನಿ ಎಂದಿದ್ದಾರೆ.
ಅಫ್ಘಾನಿಸ್ತಾನ ತಂಡಕ್ಕೆ ಮೆಚ್ಚುಗೆ
ಇನ್ನು ಬಲಿಷ್ಠ ಪಾಕಿಸ್ತಾನ ತಂಡವನ್ನು ಸೋಲಿಸಿದ ಅಫ್ಘಾನಿಸ್ತಾನ ತಂಡದ ಆಟಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ಗೆಲುವು ನೋಡಿ ಅಫ್ಘಾನಿಸ್ತಾನದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರೆ, ಭಾರತದ ಕ್ರಿಕೆಟ್ ಅಭಿಮಾನಿಗಳು ಕೂಡ ಅಫ್ಘನ್ ತಂಡಕ್ಕೆ ಶುಭ ಕೋರಿದ್ದಾರೆ.
ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ, ಅಫ್ಘಾನಿಸ್ತಾನ ತಂಡದ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ತಂಡದ ಮೆಂಟರ್ ಆಗಿರುವ ಅಜಯ್ ಜಡೇಜಾ ಅವರನ್ನು ಕೂಡ ಕೊಂಡಾಡಿದ್ದಾರೆ. "ಈ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವು ಅತ್ಯದ್ಭುತವಾಗಿದೆ. ಬ್ಯಾಟ್‌ನೊಂದಿಗೆ ಅವರ ಶಿಸ್ತು, ಅವರು ತೋರಿದ ಮನೋಧರ್ಮ ಮತ್ತು ವಿಕೆಟ್‌ಗಳ ನಡುವೆ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಇದು ಬಹುಶಃ ಅಜಯ್ ಜಡೇಜಾ ಅವರ ಕಾರಣದಿಂದಾಗಿರಬಹುದು, ಅವರ ಉಪಸ್ಥಿತಿ ತಂಡದ ಮೇಲೆ ಪ್ರಭಾವ ಬೀರಿದೆ" ಎಂದು ತೆಂಡೂಲ್ಕರ್ ತಮ್ಮ ಮಾಜಿ ಭಾರತ ತಂಡದ ಆಟಗಾರನನ್ನು ಉಲ್ಲೇಖಿಸಿ ಹೇಳಿದರು. ಈ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಮಾರ್ಗದರ್ಶಕರಾಗಿ ಅಜಯ್ ಜಡೇಜಾ ಕೆಲಸ ಮಾಡುತ್ತಿದ್ದಾರೆ." ಎಂದು ಮೆಚ್ಚಿಕೊಂಡಿದ್ದಾರೆ.
"ಪಾಕಿಸ್ತಾನಕ್ಕೆ ಈ ಸೋಲು ನುಂಗಲು ಕಠೀನವಾಗಲಿದೆ. ಇದು ಆಕಸ್ಮಿಕ ಗೆಲುವಲ್ಲ, ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನ ಪಾಕಿಸ್ತಾನದ ವಿರುದ್ಧ ಹಲವು ಬಾರಿ ಗೆಲುವಿನ ಸಮೀಪ ಬಂದಿದೆ. ಅವರ ಅಗ್ರ ನಾಲ್ಕು ಬ್ಯಾಟಿಂಗ್ ಪ್ರಯತ್ನಕ್ಕೆ ಧನ್ಯವಾದ ಇಂದು ಗೆಲುವಿನ ಗೆರೆ ದಾಟಿದೆ, ಚೆನ್ನಾಗಿ ಆಡಿದ್ದಾರೆ" ಎಂದು ವಾಸಿಂ ಜಾಫರ್ ಟ್ವೀಟ್ ಮಾಡಿದ್ದಾರೆ.
"ಅಫ್ಘಾನಿಸ್ತಾನ. ನೀವು ಬ್ರೇವ್‌ಹಾರ್ಟ್ಸ್. ಎರಡು ವಿಶ್ವ ಕಪ್ ವಿಜೇತರನ್ನು ಸೋಲಿಸಿದ್ದೀರಾ, ಜಗತ್ತನ್ನು ವೇಗವಾಗಿ ತಿರುಗುವಂತೆ ಮಾಡುತ್ತದೆ. ದೊಡ್ಡ ವೇದಿಕೆಯಲ್ಲಿ ನೀವು ಏನನ್ನು ರೂಪಿಸಿದ್ದೀರಿ ಎಂಬುದನ್ನು ಜಗತ್ತಿಗೆ ತೋರಿಸಿದ್ದೀರಿ." ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications