India vs Pakistan: ಐಐಟಿ ಬಾಬಾಗಾಗಿ ಹುಡುಕಾಡುತ್ತಿರುವ ಭಾರತ ತಂಡದ ಅಭಿಮಾನಿಗಳು!
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 2017ರ ಫೈನಲ್ ಸೋಲಿನ ಸೇಡು ತೀರಿಸಿಕೊಂಡಿರುವ ಭಾರತ, ಪಾಕಿಸ್ತಾನವನ್ನು ಪಂದ್ಯಾವಳಿಯಿಂದಲೇ ಹೊರದಬ್ಬಿದ್ದು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸುವ ಮೂಲಕ ಭಾರತದ ಗೆಲುವು ಸುಲಭವಾಗಿಸಿದರು.
ಭಾರತ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಐಐಟಿ ಬಾಬಾ ಎಲ್ಲಿದ್ದಾರೆ ಎಂದು ಹುಡುಕಾಡುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ವೈರಲ್ ಆಗಿದ್ದ ಐಐಟಿ ಬಾಬಾ, ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದರು.

ಇದೀಗ ಐಐಟಿ ಬಾಬಾ ಭವಿಷ್ಯ ಸುಳ್ಳಾಗಿದ್ದು ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇದರಿಂದ ಸುಳ್ಳು ಭವಿಷ್ಯ ಹೇಳಿದ ಐಐಟಿ ಬಾಬಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು ಬಗೆ ಬಗೆಯ ಮೀಮ್ಸ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಲವು ತಮಾಷೆಯ ಮೀಮ್‌ಗಳು ಸಖತ್ ವೈರಲ್ ಆಗುತ್ತಿವೆ.
ಐಐಟಿ ಪದವೀಧರನಾಗಿದ್ದ ಅಭಯ್ ಸಿಂಗ್ ಇತ್ತೀಚೆಗೆ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ ಬಳಿಕ ಐಐಟಿ ಬಾಬಾ ಎಂದೇ ಪ್ರಸಿದ್ಧವಾಗಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂ ಲೈವ್‌ಗೆ ಬಂದಿದ್ದ ಅವರು, ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತದೆ ಎಂದು ಭವಿಷ್ಯ ನುಡಿದಿದ್ದರು. ವಿರಾಟ್ ಕೊಹ್ಲಿ ಎಲ್ಲಾ ಪ್ರಯತ್ನ ಮಾಡಿದರೂ ಕೂಡ ಭಾರತದ ಸೋಲು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದರು.
ಆದರೆ ಈಗ ಅದೇ ವಿರಾಟ್ ಕೊಹ್ಲಿ ಕೊನೆಯವರೆಗೂ ನಿಂತು ತಮ್ಮ ಶತಕವನ್ನು ಪೂರ್ಣಗೊಳಿಸಿದ್ದು ಮಾತ್ರವಲ್ಲದೆ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಸ್ವಯಂಘೋಷಿತ ದೇವಮಾನವನ ಭವಿಷ್ಯ ಸುಳ್ಳಾಗಿದೆ.
ಕೆಲವು ಅಭಿಮಾನಿಗಳು ಐಐಟಿ ಬಾಬಾ ವಿರುದ್ಧ ಕಿಡಿ ಕಾರಿದ್ದಾರೆ. ದೇವರ ಹೆಸರಿನಲ್ಲಿ ಹೀಗೆ ಸುಳ್ಳು ಹೇಳಿಕೊಂಡು ಇನ್ನೆಷ್ಟು ಜನಕ್ಕೆ ಮೋಸ ಮಾಡಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಈತ ಢೋಂಗಿ ಬಾಬಾ ಪ್ರಚಾರಕ್ಕೋಸ್ಕರ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಐಐಟಿ ಬಾಬಾ ಏನೇ ಹೇಳಿದ್ದರೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿರುವುದು, ವಿರಾಟ್ ಕೊಹ್ಲಿ ಶತಕ ಬಾರಿಸಿರುವುದು ಅಭಿಮಾನಿಗಳಿಗೆ ಹಬ್ಬದಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿಯನ್ನು ಕೊಂಡಾಡುತ್ತಿದ್ದು, ಒಂದು ವಿಕೆಟ್ ಪಡೆದು ಶುಭಮನ್ ಗಿಲ್‌ಗೆ ಪೆವಿಲಿಯನ್‌ಗೆ ಹೋಗು ಎನ್ನುವಂತೆ ಸನ್ನೆ ಮಾಡಿದ್ದ ಅಹಮದ್ ಅಬ್ರಾರ್ ರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ.












Click it and Unblock the Notifications