Eng vs NZ: ಒಟ್ಟು 4,658 ಏಕದಿನ ಪಂದ್ಯಗಳು: ಇದೇ ಮೊದಲ ಬಾರಿಗೆ ಈ ದಾಖಲೆ ನಿರ್ಮಿಸಿದ ಇಂಗ್ಲೆಂಡ್
ಏಕದಿನ ವಿಶ್ವಕಪ್ 2023ರ ಮೊದಲ ಪಂದ್ಯದಲ್ಲೇ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಈ ದಾಖಲೆ ಬರೆದಿದೆ.
ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯವೊಂದರಲ್ಲಿ ತಂಡದ ಎಲ್ಲಾ 11 ಆಟಗಾರರು ಎರಡಂಕಿ ರನ್ ಗಳಿಸಿದ್ದಾರೆ. ಇದುವರೆಗೂ 4,658 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿದ್ದರೂ ಒಮ್ಮೆಯೂ ತಂಡದ ಎಲ್ಲಾ ಆಟಗಾರರು ಎರಡಂಕಿ ಗಳಿಸಿರಲಿಲ್ಲ ಎನ್ನುವುದು ವಿಶೇಷ. ಅದನ್ನು ಇಂಗ್ಲೆಂಡ್ ಮೊದಲ ಬಾರಿಗೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತು. ಜೋ ರೂಟ್ 86 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.
ಎಲ್ಲಾ 11 ಆಟಗಾರರಿಂದ ಎರಡಂಕಿ ರನ್
ಜಾನಿ ಬೈರ್ ಸ್ಟೋ ಮತ್ತು ಡೇವಿಡ್ ಮಲನ್ ಉತ್ತಮ ಆರಂಭ ನೀಡಿದರೂ, ಬೇಗನೆ ವಿಕೆಟ್ ಒಪ್ಪಸಿದರು. ಡೇವಿಡ್ ಮಲನ್ 14 ರನ್ ಗಳಿಸಿದರೆ, ಬೈರ್ ಸ್ಟೋ 33 ರನ್ ಗಳಿಸಿದರು. ನಂತರ ಬಂದ ಜೋ ರೂಟ್ 86 ಎಸೆತಗಳಲ್ಲಿ 77 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಬೆನ್‌ಸ್ಟೋಕ್ಸ್ ಬದಲಾಗಿ ತಂಡದಲ್ಲಿ ಸ್ಥಾನ ಪಡೆದ ಹ್ಯಾರಿ ಬ್ರೂಕ್ ಸ್ಫೋಟಕ ಆರಂಭ ಮಾಡಿದರೂ ಬೇಗನೆ ವಿಕೆಟ್ ಒಪ್ಪಿಸಿದರು. 16 ಎಸೆತಗಳಲ್ಲಿ 4 ಬೌಂಡರಿ ಒಂದು ಸಿಕ್ಸರ್ ಸಹಿತ 25 ರನ್ ಗಳಿಸಿ ಔಟಾದರು. ಮೊಯೀನ್ ಅಲಿ 11 ರನ್ ಗಳಿಸಿದರೆ, ನಾಯಕ ಜೋಸ್ ಬಟ್ಲರ್ 43 ರನ್ ಗಳಿಸಿದರು.
ಲಿಯಾಮ್ ಲಿವಿಂಗ್‌ಸ್ಟೋನ್ 20 ರನ್, ಸ್ಯಾಮ್ ಕರಾನ್ 14 ರನ್, ಕ್ರಿಸ್ ವೋಕ್ಸ್ 11 ರನ್ ಗಳಿಸಿದರು. ಆದಿಲ್ ರಶೀದ್ ಅಜೇಯ 15 ರನ್ ಮತ್ತು ಮಾರ್ಕ್ ವುಡ್ ಅಜೇಯ 13 ರನ್ ಗಳಿಸಿ ಇಂಗ್ಲೆಂಡ್ ಅಪರೂಪದ ದಾಖಲೆ ಬರೆಯಲು ನೆರವಾದರು.
ನ್ಯೂಜಿಲೆಂಡ್ ಉತ್ತಮ ಬೌಲಿಂಗ್
ಸ್ಫೋಟಕ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಇಂಗ್ಲೆಂಡ್ ತಂಡವನ್ನು 300 ರನ್‌ಗಳ ಗಡಿದಾಟದಂತೆ ನ್ಯೂಜಿಲೆಂಡ್ ಬೌಲರ್ ಗಳು ನಿಯಂತ್ರಿಸಿದರು. ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದರೆ, ಜಿಮ್ಮಿ ನೀಶಮ್ ಮತ್ತು ಗ್ಲೆನ್ ಫಿಲಿಪ್ಸ್ ತಲಾ 2 ವಿಕೆಟ್ ಪಡೆದರು. ರಚಿನ್ ರವೀಂದ್ರ ಮತ್ತು ಟ್ರೆಂಟ್ ಬೌಲ್ಟ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.












Click it and Unblock the Notifications