ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಹುಡುಗ ಮನು ಈಗ ಹೊಸ ಸ್ಪೋರ್ಟ್ಸ್ ಸ್ಟಾರ್

|
Google Oneindia Kannada News

ಅಹ್ಮದಾಬಾದ್, ಸೆ. 30: ಗುಜರಾತ್‌ನಲ್ಲಿ ಆರಂಭವಾಗಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಹಳ ಮಂದಿಯ ಆಸಕ್ತಿ ಇದೀಗ ಹಾಸನದ ಹುಡುಗ, ಜಾವೆಲಿನ್ ಪಟು ಡಿಪಿ ಮನು aka ಮನು ಶೆಟ್ಟಿ ಮೇಲೆ ನೆಟ್ಟಿದೆ. ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲಿ ಮನು ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.

ಮನು ಶೆಟ್ಟಿ ನ್ಯಾಷನಲ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುತ್ತಾರಾ ಎಂಬುದಕ್ಕಿಂತ ಹೆಚ್ಚಾಗಿ ಅವರು ಭರ್ಜಿಯನ್ನು ಎಷ್ಟು ದೂರಕ್ಕೆ ಎಸೆಯುತ್ತಾರೆ ಎಂಬುದು ಸದ್ಯ ಎಲ್ಲರ ಕುತೂಹಲ. ನೀರಜ್ ಚೋಪ್ರಾ ಬಿಟ್ಟರೆ ಸದ್ಯ ಭಾರತೀಯ ಪುರುಷರಲ್ಲಿ ಬೇರೆ ಯಾರೂ ಕೂಡ ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿಲ್ಲ. ನೀರಜ್ ನಂತರ ಮನು ಶೆಟ್ಟಿಯೇ ಸದ್ಯ ಬೆಸ್ಟ್ ಜಾವೆಲಿನ್ ಪಟು ಎನಿಸಿದ್ದಾರೆ.

2023ರಲ್ಲಿ ಬೆಲ್‌ಗ್ರೇಡ್ ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಇದೆ. ಅದಕ್ಕೆ ಅರ್ಹತೆ ಗಿಟ್ಟಿಸಬೇಕಾದರೆ ಕನಿಷ್ಠ 85.2 ಮೀಟರ್ ದೂರಕ್ಕೆ ಭರ್ಜಿ ಎಸೆಯಬೇಕು. ಅಥವಾ ಅವರ ಗ್ಲೋಬಲ್ ರ‍್ಯಾಂಕಿಂಗ್ ಉತ್ತಮಗೊಳ್ಳಬೇಕು. 2023ರಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕೂಡ ಮನು ಸಾಮರ್ಥ್ಯ ತೋರ್ಪಡಿಕೆಗೆ ಸೂಕ್ತ ವೇದಿಕೆಯಾಗಿದೆ.

ಅಹಮದಾಬಾದ್‌ನಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪಿಎಂ ಮೋದಿ ಚಾಲನೆಅಹಮದಾಬಾದ್‌ನಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪಿಎಂ ಮೋದಿ ಚಾಲನೆ

ಸದ್ಯ ಮನು ಅವರ ಅತ್ಯುತ್ತಮ ಎಸೆತ ಎಂದರೆ 84.35 ಮೀಟರ್. ಹೀಗಾಗಿ, ಅವರು 85 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಆದರೆ, 22 ವರ್ಷದ ಮನು ಶೆಟ್ಟಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಇದು ಸರಿಯಾದ ಸಮಯ. ವಿಶ್ವ ಚಾಂಪಿಯನ್‌ಶಿಪ್‌ ಮತ್ತು ಏಷ್ಯನ್ ಗೇಮ್ಸ್‌ಗೆ ಅವರು ಅರ್ಹತೆ ಪಡೆಯುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಗೇಮ್ಸ್‌ನಲ್ಲಿ ಅವರ ಎಸೆತದ ಮೇಲೆ ಹಲವರ ಕುತೂಹಲದ ನೋಟ ನೆಟ್ಟಿದೆ.

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಾ

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಾ

ಮನು ಶೆಟ್ಟಿ ಹಾಸನ ಜಿಲ್ಲೆಯ ಬೇಲೂರಿನ ಕುಪ್ಪಗೋಡು ನಾಗನಹಳ್ಳಿಯನವರು. ಅವರದ್ದು ಕೃಷಿಕ ಕುಟುಂಬ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಲೇ ಅವರು ಶಾಲೆಗೆ ಹೋಗುತ್ತಿದ್ದ ಕಷ್ಟದ ಪರಿಸ್ಥಿತಿಯಲ್ಲಿ ಬೆಳೆದು ಬಂದವರು.

ಓದಿಗಿಂತ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಮನು ಶಾಲೆಯಲ್ಲಿ ಹೈಜಂಪ್, ಲಾಂಗ್ ಜಂಪ್, ವಾಲಿಬಾಲ್ ಇತ್ಯಾದಿ ಕ್ರೀಡೆಯತ್ತ ವಾಲಿದ್ದರು. ಅಗ 2014. ಇವರ ಶಾಲೆಯ ದೈಹಿಕ ಶಿಕ್ಷಕರು ಮನು ಕೈಗೆ ಬಿದಿರಿನ ಭರ್ಜಿಯನ್ನು ಕೊಟ್ಟು ಎಸೆಯಲು ಹೇಳಿದರು. ಅಲ್ಲಿಂದ ಮನುಗೆ ಭರ್ಜಿ ಎಸೆತ ಇಷ್ಟವಾಗತೊಡಗಿತು. ಆದರೆ, ಕಲಿಸಿಕೊಡಲು ಸರಿಯಾದ ಗುರು ಸಿಗಲಿಲ್ಲ. ಯೂಟ್ಯೂಬ್‌ನಲ್ಲಿ ಜಾವೆಲಿನ್ ಥ್ರೋ ವಿಡಿಯೋಗಳನ್ನು ನೋಡಿ ಸ್ವಯಂ ಆಗಿ ಕಲಿಯತೊಡಗಿದರು.

ರಾಜ್ಯಮಟ್ಟದ ಕ್ರೀಡಾಕೂಟವೊಂದರಲ್ಲಿ ಮನು ಪದಕ ಜಯಿಸಿದರು. ಆಗ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಮನುಗೆ ಸ್ಕಾಲರ್‌ಶಿಪ್ ಸಿಕ್ಕಿತು. ಅಲ್ಲಿಂದ ಮನು ಜಾವೆಲಿನ್ ವೃತ್ತಿಗೊಂದು ದಿಕ್ಕು ಸಿಕ್ಕಿತು.

2019ರಲ್ಲಿ ನಡೆದ ಖೇಲೋ ಇಂಡಿಯಾ ಕೂಟದಲ್ಲಿ ಅಂಡರ್-21 ವಿಭಾಗದಲ್ಲಿ ಅವರು ಜಾವೆಲಿನ್ ಅನ್ನು 65 ಮೀಟರ್ ದೂರಕ್ಕೆ ಎಸೆದು ಚಿನ್ನದ ಪದಕ ಜಯಿಸಿದ್ದರು. ಆಗ ರಾಷ್ಟ್ರಮಟ್ಟದಲ್ಲಿ ಮನು ಗಮನ ಸೆಳೆಯಲು ಆರಂಭಿಸಿದರು.

ಗುರುವಾಗಿ ಕನ್ನಡಿಗ ಕಾಶಿನಾಥ್

ಗುರುವಾಗಿ ಕನ್ನಡಿಗ ಕಾಶಿನಾಥ್

ಕಾಶಿನಾಥ್ ನಾಯ್ಕ್ ಬಹಳ ಮಂದಿಗೆ ಈಗ ಪರಿಚಿತರಾಗಿದ್ದಾರೆ. ನೀರಜ್ ಚೋಪ್ರಾ ಜಾವೆಲಿನ್ ವೃತ್ತಿಯ ಆರಂಭಿಕ ಕಾಲಘಟ್ಟದಲ್ಲಿ ಗುರುವಾಗಿದ್ದವರು ಕಾಶಿನಾಥ್ ನಾಯ್ಕ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದ ಕಾಶಿನಾಥ್ ನಾಯ್ಕ್ ಗರಡಿಯಲ್ಲಿ ನೀರಜ್ ಚೋಪ್ರಾ ಪ್ರಮುಖ ಜಾವೆಲಿನ್ ಎಸೆತದ ಟೆಕ್ನಿಕ್‌ಗಳನ್ನು ಕಲಿತಿದ್ದರು.

ಪುಣೆಯಲ್ಲಿದ್ದ ಕಾಶಿನಾಥ್ ನಾಯ್ಕ್ ಅವರಿಗೆ ಮನು ಬಗ್ಗೆ ಮಾಹಿತಿ ಹೋಗುತ್ತದೆ. ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್‌ಟಿಟ್ಯೂಟ್‌ಗೆ ಮನು ಅವರನ್ನು ಕರೆಸಿ ಪರೀಕ್ಷೆ ನಡೆಸಲಾಗುತ್ತದೆ. ಆಗ 2019. ಜಾವೆಲಿನ್ ಥ್ರೋ ಕ್ರೀಡೆಗೆ ಬೇಕಾದ ಅರ್ಹತೆ ಮನುಗೆ ಇರುವುದನ್ನು ಕಾಶಿನಾಥ್ ಕಾಣುತ್ತಾರೆ. ಸರಿಯಾದ ಟೆಕ್ನಿಕ್, ಕೋಚ್ ಇಲ್ಲದೆಯೇ ಮನು 65 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಬಲ್ಲರು ಎಂದರೆ ಅವರಿಗೆ ಸೂಕ್ತ ತರಬೇತಿ ಸಿಕ್ಕರೆ ಬಹಳ ಎತ್ತರಕ್ಕೆ ಏರಬಲ್ಲರೆಂಬುದು ಕಾಶಿನಾಥ್‌ಗೆ ಖಚಿತವಾಗಿತ್ತು. ಅಲ್ಲದೇ ಜಾವೆಲಿನ್ ಪಟುವಿಗೆ ಬೇಕಾದ ದೈಹಿಕ ಎತ್ತರ, ಮೈಕಟ್ಟು, ಕೈ ಉದ್ದ ಎಲ್ಲವೂ ಮನುಗೆ ಇತ್ತು. ಅವರಿಗೆ ಅಗತ್ಯ ಇದ್ದ ಗುರು ಈಗ ಕಾಶಿನಾಥ್ ನಾಯ್ಕ್ ರೂಪದಲ್ಲಿ ಸಿಕ್ಕಿದ್ದರು.

ಕೆಲ ದಿನಗಳಲ್ಲೇ ಗಮನಾರ್ಹ ಪ್ರಗತಿ

ಕೆಲ ದಿನಗಳಲ್ಲೇ ಗಮನಾರ್ಹ ಪ್ರಗತಿ

ಪುಣೆಯಲ್ಲಿ ಮನುಗೆ ಕೆಲ ದಿನಗಳ ಕಾಲ ಜಾವೆಲಿನ್ ತರಬೇತಿ ಕೊಟ್ಟರು ಕಾಶಿನಾಥ್. ಮತ್ತೊಮ್ಮೆ ಟ್ರಯಲ್ ಮಾಡಿದಾಗ ಕಾಶಿನಾಥ್‌ಗೆ ಅಚ್ಚರಿಯಾಗಿತ್ತು. ಡಿ.ಪಿ. ಮನು 75 ಮೀಟರ್ ಆಸುಪಾಸಿನ ದೂರಕ್ಕೆ ಭರ್ಜಿಯನ್ನು ಎಸೆಯಬಲ್ಲಷ್ಟು ಉತ್ತಮಗೊಂಡಿದ್ದರು. ಅಗ ಮನುವಿನ ಸಾಮರ್ಥ್ಯದ ಬಗ್ಗೆ ನಾಯ್ಕ್‌ಗೆ ನಂಬಿಕೆ ಇನ್ನಷ್ಟು ಹೆಚ್ಚಾಯಿತು. ಅವರನ್ನು ಹವಾಲ್ದಾರ್ ಆಗಿ ಸೇನೆಗೆ ನೇಮಕ ಮಾಡಿಕೊಳ್ಳಲಾಯಿತು.

ತರಬೇತಿ ಇನ್ನಷ್ಟು ಹೆಚ್ಚಾಯಿತು. ದಿನೇ ದಿನೇ ಮನು ಪ್ರಗತಿ ಸಾಧಿಸತೊಡಗಿದರು. ಬಹಳಷ್ಟು ಬಾರಿ 80 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಬಲ್ಲವರಾದರು. ಇಂಡಿಯನ್ ಗ್ರ್ಯಾನ್‌ಪ್ರಿ ಕ್ರೀಡಾಕೂಟದಲ್ಲಿ 82.43 ಮೀಟರ್ ದೂರಕ್ಕೆ ಎಸೆದಿದ್ದರು. ದೇಶೀಯ ಕೂಟವೊಂದರಲ್ಲಿ ಅವರು 84.35 ಮೀಟರ್ ದೂರಕ್ಕೆ ಎಸೆದಿದ್ದರು. ನೀರಜ್ ಚೋಪ್ರಾ ಬಿಟ್ಟರೆ ಬೇರಾವ ಭಾರತೀಯರು ಕೂಡ ಇಷ್ಟು ದೂರಕ್ಕೆ ಭರ್ಜಿ ಎಸೆದಿಲ್ಲ. ಹೀಗಾಗಿ, ಮನು ಸದ್ಯ ಜಾವೆಲಿನ್‌ನಲ್ಲಿ ಭಾರತದಲ್ಲಿ ಸೆಕೆಂಡ್ ಬೆಸ್ಟ್. ಇದೇ ವರ್ಷ ಬರ್ಮಿಂಗ್‌ಹ್ಯಾಂನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮನು 82.28 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಐದನೇ ಸ್ಥಾನ ಪಡೆದಿದ್ದರು.

ಮುಂದಿನ ಮಟ್ಟಕ್ಕೇರುವುದೇ ಸವಾಲು

ಮುಂದಿನ ಮಟ್ಟಕ್ಕೇರುವುದೇ ಸವಾಲು

ಜಾವೆಲಿನ್‌ನಲ್ಲಿ 80 ಮೀಟರ್‌ಗಿಂತ ದೂರ ಎಸೆಯಬಲ್ಲ ಭಾರತೀಯ ಆಟಗಾರರು ಮನು ಸೇರಿ ನಾಲ್ಕೈದು ಮಂದಿ ಇದ್ದಾರೆ. ಮನು ಶೆಟ್ಟಿ, ರೋಹಿತ್ ಯಾದವ್, ಶಿವಪಾಲ್ ಯಾದವ್ ಸಾಹಿಲ್ ಸಿಲ್ವಾಲ್, ಯಶವೀರ್ ಸಿಂಗ್ ಅವರೆಲ್ಲರೂ ಹೆಚ್ಚೂಕಡಿಮೆ ಒಂದೇ ಮಟ್ಟದಲ್ಲಿದ್ದಾರೆ. 85 ಮೀಟರ್‌ಗಿಂತ ದೂರ ಎಸೆಯಬಲ್ಲವರಿಗೆ ಅಂತಾರಾಷ್ಟ್ರೀಯ ಅವಕಾಶಗಳು ಹೆಚ್ಚಾಗಿ ಸಿಗತೊಡಗುತ್ತವೆ. ಹೀಗಾಗಿ, ಮನು ಶೆಟ್ಟಿಯ ಗುರಿ ಬಹಳ ನಿಶ್ಚಿತವಾಗಿದೆ.

ನ್ಯಾಷನಲ್ ಗೇಮ್ಸ್‌ನಿಂದ ಅವರಿಗೆ ಹೆಚ್ಚಿನ ಉಪಯೋಗ ಇಲ್ಲದೇ ಇದ್ದರೂ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಅದೊಂದು ಒಳ್ಳೆಯ ವೇದಿಕೆ ಹೌದು. ತಮ್ಮ ವೈಯಕ್ತಿಕ ಸಾಧನೆಯನ್ನು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮಪಡಿಸಿಕೊಳ್ಳಬಹುದು ಎಂದು ನಾವು ಭರವಸೆ ಇಟ್ಟುಕೊಳ್ಳಲಡ್ಡಿಯಿಲ್ಲ.

ಜಾವೆಲಿನ್ ಥ್ರೋ ಸ್ಪರ್ಧೆಗಳಲ್ಲಿ ಯಾರು ಕೂಡ ಒಂದೇ ತೆರನಾದ ಪ್ರದರ್ಶನ ತೋರಲು ಅಸಾಧ್ಯ. ಇದಕ್ಕೆ ಕಾರಣ ಒಂದೊಂದು ಸ್ಥಳದಲ್ಲಿರುವ ವಾತಾವರಣವು ಜಾವೆಲಿನ್ ಆಟದ ಮೇಲೆ ಪರಿಣಾಮ ಬೀರುತ್ತದೆ. ಗಾಳಿಯ ವೇಗ ಇತ್ಯಾದಿ ಅಂಶಗಳು ಪಾತ್ರವಹಿಸುತ್ತವೆ. ಹೀಗಾಗಿ, ಕೆಲ ಜಾವೆಲಿನ್‌ಪಟುಗಳು ಒಂದು ಟೂರ್ನಿಯಲ್ಲಿ 90 ಮೀಟರ್‌ಗಿಂತ ಹೆಚ್ಚು ದೂರಕ್ಕೆ ಎಸೆದರೆ ನಂತರ ಕೂಟವೊಂದರಲ್ಲಿ 85 ಮೀಟರ್‌ಗೆ ಸೀಮಿತಗೊಳ್ಳುವುದುಂಟು.

ಕೋಚ್‌ಗೆ ವಿಶ್ವಾಸ
ನೀರಜ್ ಚೋಪ್ರಾ ಹಾದಿಯಲ್ಲಿ ಮನು ಸಾಗಬಹುದು ಎಂಬ ವಿಶ್ವಾಸ ಕೋಚ್ ಕಾಶಿನಾಥ್ ನಾಯ್ಕ್ ಅವರಿಗೆ ಬಲವಾಗಿ ಇದೆ. ಕಳೆದ ಕೆಲ ತಿಂಗಳಲ್ಲಿ ಮನುವಿನ ಕೆಲ ಜಾವೆಲಿನ್ ಟೆಕ್ನಿಕ್ ಅನ್ನು ಉತ್ತಮಗೊಳಿಸುವ ಕಡೆ ಕಾಶಿನಾಥ್ ಗಮನ ಕೊಟ್ಟಿದ್ದಾರೆ. ದೈಹಿಕ ಶಕ್ತಿಯ ಜೊತೆಗೆ ಟೆಕ್ನಿಕ್ ಸಮರ್ಪಕವಾಗಿದ್ದರೆ ಯಶಸ್ಸು ಸಾಧಿಸಬಹುದು. ಭರ್ಜಿಯನ್ನು ಎಸೆಯುವಾಗ ಮನು ಮಾಡುತ್ತಿದ್ದ ಸಣ್ಣಪುಟ್ಟ ತಪ್ಪುಗಳನ್ನು ಕೋಚ್ ಸರಿಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮನು ಶೆಟ್ಟಿ ಹೊಸ ಸ್ತರದಲ್ಲಿರುವುದನ್ನು ಕಾಣಬಹುದು ಎನ್ನುತ್ತಾರೆ ಕಾಶಿನಾಥ್ ನಾಯ್ಕ್.

(ಒನ್ಇಂಡಿಯಾ ಸುದ್ದಿ)

English summary
Indian Javelin field is brimming with confidence as many youngsters like DP Manu of Hassan are looking to break even in international level. The story of Manu Shetty is inspiring.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X