India vs Pakistan: ತಬ್ಬಿಕೊಳ್ಳಬೇಡಿ! ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನ ಪಾಕಿಸ್ತಾನ ತಂಡಕ್ಕೆ ಎಚ್ಚರಿಕೆ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 19 ರಿಂದ ಪಂದ್ಯಾವಳಿ ಆರಂಭವಾಗಲಿದ್ದು ಪಾಕಿಸ್ತಾನದ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಆತಿಥೇಯ ಪಾಕಿಸ್ತಾನ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಫೆಬ್ರವರಿ 23 ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಪಾಕಿಸ್ತಾನ ಮುಖಾಮುಖಿಯಾಗಲಿದ್ದು ಈ ಪಂದ್ಯ ಈಗಾಗಲೇ ಭಾರಿ ಕುತೂಹಲ ಕೆರಳಿಸಿದೆ. ಈ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದು, ಅಲ್ಲಿನ ಸರ್ಕಾರ, ಕ್ರಿಕೆಟ್ ಮಂಡಳಿ, ಮಾಜಿ ಆಟಗಾರರು ಮತ್ತು ಅಭಿಮಾನಿಗಳಿಗೆ ಸಿಟ್ಟು ತರಿಸಿದೆ. ಯಾರು ಏನೇ ಮಾಡಿದರೂ ಹಠ ಹಿಡಿದ ಬಿಸಿಸಿಐ ಭಾರತ ತಂಡವನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಕಳಿಸಲ್ಲ ಎಂದು ಹೇಳಿತ್ತು.

ಮೊದಲು ಭಾರತ ತಂಡದ ಹಠಕ್ಕೆ ಬಗ್ಗದ ಪಾಕಿಸ್ತಾನ ಅಂತಿಮವಾಗಿ ತಟಸ್ಥ ಸ್ಥಳದಲ್ಲಿ ಭಾರತದ ಪಂದ್ಯಗಳನ್ನು ಆಯೋಜನೆ ಮಾಡಲು ಒಪ್ಪಿಕೊಂಡಿತು. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು ಫೆಬ್ರವರಿ 20 ರಂದು ನಡೆಯುವ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಎದುರಿಸಲಿದೆ.
ಪಾಕಿಸ್ತಾನ ತಂಡಕ್ಕೆ ಎಚ್ಚರಿಕೆ
ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ಒಪ್ಪದೆ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಯೋಜನೆಯಾಗುವಂತೆ ಮಾಡಿದ್ದು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಹಲವು ವರ್ಷಗಳ ಬಳಿಕ ತವರಿನಲ್ಲಿ ಭಾರತ ಪಾಕಿಸ್ತಾನ ಪಂದ್ಯ ನೋಡಲು ಕಾತರದಿಂದ ಕಾಯುತ್ತಿದ್ದವರಿಗೆ ಸಹಜವಾಗಿಯೇ ಕೋಪ ಬಂದಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಪಾಕಿಸ್ತಾನ ತಂಡದ ಆಟಗಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರ ಜೊತೆ ಸ್ನೇಹವನ್ನು ಬದಿಗಿಡುವಂತೆ ಪಾಕ್ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಪತ್ರಕರ್ತ ಫರೀದ್ ಖಾನ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ ಅಭಿಮಾನಿಯೊಬ್ಬರು, ಭಾರತದ ವಿರುದ್ಧದ ಪಂದ್ಯದಲ್ಲಿ ನಿಮ್ಮ ಸ್ನೇಹವನ್ನು ಬದಿಗಿಡಿ ಎಂದಿದ್ದಾರೆ, ಪಂದ್ಯದ ವೇಳೆ ಪಾಕಿಸ್ತಾನ ಆಟಗಾರರು ವಿರಾಟ್ ಕೊಹ್ಲಿ ಅಥವಾ ಇತರ ಭಾರತೀಯ ಆಟಗಾರರನ್ನು ತಬ್ಬಿಕೊಳ್ಳಬಾರದು ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 3-2 ಮುನ್ನಡೆ ಹೊಂದಿದೆ. 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು, ಈಗ ಭಾರತ ಆ ಸೋಲಿಗೆ ಸೇಡು ತೀರಿಸಿಕೊಳ್ಳಲಿ ಎಂದು ಭಾರತೀಯ ಅಭಿಮಾನಿಗಳು ಕಾಯುತ್ತಿದ್ದಾರೆ.












Click it and Unblock the Notifications