ಕ್ರಿಕೆಟ್ ನೋಡುವುದಿಲ್ಲ, ಅವರು ಯಾರೆಂದು ಗೊತ್ತಾಗಲಿಲ್ಲ: ರಿಷಬ್ ಪಂತ್‌ರನ್ನು ರಕ್ಷಿಸಿದ ಬಸ್ ಚಾಲಕ ಹೇಳಿದ್ದೇನು?
ನವದೆಹಲಿ, ಡಿಸೆಂಬರ್ 30: ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮರ್ಸಿಡಿಸ್ ಎಸ್‌ಯುವಿಯಲ್ಲಿದ್ದ ಕ್ರಿಕೆಟಿಗ ರಿಷಬ್ ಪಂತ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಿಂದ ಹೊರಗೆ ಕರೆದುಕೊಂಡು ಹೋಗಿ, ಪ್ರಾಣ ರಕ್ಷಿಸಿದ ಬಸ್ ಚಾಲಕನಿಗೆ ರಿಷಬ್ ಪಂತ್ ಯಾರೆಂದು ಗೊತ್ತೆ ಇರಲಿಲ್ಲವಂತೆ.
ಈ ವಿಚಾರದ ಕುರಿತು ಹರಿಯಾಣ ರೋಡ್‌ವೇಸ್ ಬಸ್ ಚಾಲಕ 'ಎನ್‌ಡಿಟಿವಿ'ಗೆ ಮಾತನಾಡಿದ್ದಾರೆ.
'ಗಾಯಗೊಂಡ ವ್ಯಕ್ತಿ ಯಾರೆಂದು ತಿಳಿದಿರಲಿಲ್ಲ. ಆಂಬ್ಯುಲೆನ್ಸ್‌ಗೆ ವ್ಯವಸ್ಥೆ ಮಾಡಲು ತ್ವರಿತವಾಗಿ ಕೆಲಸ ಮಾಡಿದೆ' ಎಂದು ಹೇಳಿದ್ದಾರೆ.
ಕಾರು ವಿರುದ್ಧ ದಿಕ್ಕಿನಿಂದ ಅತಿವೇಗದಲ್ಲಿ ಬರುತ್ತಿತ್ತು, ಡಿವೈಡರ್‌ಗೆ ಡಿಕ್ಕಿ ಹೊಡೆಯಿತು ಎಂದು ಬಸ್ ಚಾಲಕ ಸುಶೀಲ್ ಮಾನ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

'ನಾನು ನನ್ನ ಬಸ್ ಅನ್ನು ಬದಿಯಲ್ಲಿ ಬಿಟ್ಟು, ಅವಸರವಾಗಿ ಡಿವೈಡರ್ ಕಡೆಗೆ ಓಡಿದೆ' ಎಂದು ಮಾನ್ ಹೇಳಿದ್ದಾರೆ.
'ಕಾರು ನಿಲ್ಲುವ ಮೊದಲು ಬಸ್ಸು ಚಲಿಸುತ್ತಿದ್ದರಿಂದ ಅದರ ಕೆಳಗೆ ಪಲ್ಟಿಯಾಗುತ್ತದೆ ಎಂದು ನಾನು ಭಾವಿಸಿದ್ದೆ' ಎಂದು ಆತ ತಿಳಿಸಿದ್ದಾರೆ.
'ಚಾಲಕ (ಪಂತ್) ಕಿಟಕಿಯಿಂದ ಅರ್ಧದಷ್ಟು ಹೊರಗಿದ್ದರು. ಅವರು ಕ್ರಿಕೆಟಿಗ ಎಂದು ನನಗೆ ಹೇಳಿದರು' ಎಂದು ಮಾನ್ ಹೇಳಿದ್ದಾರೆ.
ಕ್ರಿಕೆಟಿಗ ತಮ್ಮ ತಾಯಿಗೆ ಕರೆ ಮಾಡಲು ಕೇಳಿದರು. ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಮಾನ್ ತಿಳಿಸಿದ್ದಾರೆ.
'ನಾನು ಕ್ರಿಕೆಟ್ ನೋಡುವುದಿಲ್ಲ ಮತ್ತು ಇದು ರಿಷಬ್ ಪಂತ್ ಎಂದು ನನಗೆ ತಿಳಿದಿರಲಿಲ್ಲ. ಆದರೆ ನನ್ನ ಬಸ್‌ನಲ್ಲಿದ್ದ ಇತರರು ಅವರನ್ನು ಗುರುತಿಸಿದರು' ಎಂದು ಮಾನ್ ಹೇಳಿದ್ದಾರೆ.
'ರಿಷಭ್‌ರನ್ನು ಹೊರತೆಗೆದ ನಂತರ, ಬೇರೆ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸಲು ನಾನು ಬೇಗನೆ ಕಾರೊಳಗೆ ಹುಡುಕಿದೆ. ನಾನು ಆ ಕಾರಿನಲ್ಲಿದ್ದ ನೀಲಿ ಬ್ಯಾಗ್‌ನಿಂದ ಏಳೆಂಟು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಆಂಬ್ಯುಲೆನ್ಸ್‌ನವರಿಗೆ ನೀಡಿದೆ' ಎಂದು ಅವರು ತಿಳಿಸಿದ್ದಾರೆ.
ಪಂತ್ ಅವರು ಇಂದು ಬೆಳಿಗ್ಗೆ ತಮ್ಮ ತವರೂರಾದ ರೂರ್ಕಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ವೇಗದಲ್ಲಿದ್ದ ಮರ್ಸಿಡಿಸ್ ಎಸ್‌ಯುವಿಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಸ್ತಿತ ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications