RCB vs DC: ಕೆಎಲ್ ರಾಹುಲ್ ಅಬ್ಬರಕ್ಕೆ ತವರಿನಲ್ಲಿ ಸೋಲೊಪ್ಪಿಕೊಂಡ ಆರ್‌ಸಿಬಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕರ್ನಾಟಕದ ಹುಡುಗ ಕೆಎಲ್ ರಾಹುಲ್ ಅಬ್ಬರಿಸಿದರು. ಕೆಎಲ್ ರಾಹುಲ್ ಮಾಸ್ಟರ್ ಕ್ಲಾಸ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಐಪಿಎಲ್ 2025ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಜೇಯ ಓಟವನ್ನು ಮುಂದುವರೆಸಿದೆ, ಸತತವಾಗಿ 4 ಪಂದ್ಯಗಳನ್ನು ಗೆದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸ್ಫೋಟಕ ಆರಂಭ ಪಡೆದ ಆರ್ ಸಿಬಿ ಫಿಲ್ ಸಾಲ್ಟ್ ರನೌಟ್ ಆಗುತ್ತಿದ್ದಂತೆ ದಿಕ್ಕೆಟ್ಟಿತು. ಫಿಲ್ ಸಾಲ್ಟ್ 17 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 37 ರನ್ ಗಳಿಸಿದರು, ಮಿಚೆಲ್ ಸ್ಟಾರ್ಕ್ ಅವರ ಒಂದೇ ಓವರ್ ನಲ್ಲಿ 30 ರನ್ ಸಿಡಿಸಿ ಅಬ್ಬರಿಸಿದರು. ಆದರೆ ಅವರು ರನೌಟ್ ಆಗಿದ್ದೇ ಆರ್ ಸಿಬಿಗೆ ದೊಡ್ಡ ಹೊಡೆತವಾಯಿತು.

ಫಿಲ್ ಸಾಲ್ಟ್ ರನೌಟ್ ಆಗುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ಬಿಗಿ ಬೌಲಿಂಗ್ ದಾಳಿ ಮಾಡುವ ಮೂಲಕ ಆರ್ ಸಿಬಿ ರನ್ ಗಳಿಸಲು ಕಡಿವಾಣ ಹಾಕಿತು. ಕೊಹ್ಲಿ 22 ರನ್ ಗಳಿಸಿ ಔಟಾದರೆ, ನಾಯಕ ರಜತ್ ಪಟಿದಾರ್ 25 ರನ್ ಗಳಿಸಿ ಔಟಾದರು. ಲಿಯಾಮ್ ಲಿವಿಂಗ್‌ಸ್ಟೋನ್, ದೇವದತ್ ಪಡಿಕ್ಕಲ್ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಕೊನೆಯಲ್ಲಿ ಟಿಮ್ ಡೇವಿಡ್ 20 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 37 ರನ್ ಗಳಿಸುವ ಮೂಲಕ ಆರ್ ಸಿಬಿ 163 ರನ್ ಕಲೆಹಾಕಲು ಪ್ರಮುಖ ಕೊಡುಗೆ ನೀಡಿದರು.
ಕೆಎಲ್ ರಾಹುಲ್ ಅಬ್ಬರ
164 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರ್ ಸಿಬಿ ಬೌಲರ್ ಗಳು ಆರಂಭದಲ್ಲೇ ಆಘಾತ ನೀಡಿದರು. ಫಾಫ್ ಡುಪ್ಲೆಸಿಸ್ 2 ರನ್ ಗಳಿಸಿ ಔಟಾದರೆ, ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು ಅಭಿಷೇಕ್ ಪೊರೆಲ್ ತಲಾ 7 ರನ್ ಗಳಿಸಿ ಔಟಾದರು. ಆದರೆ ಕೆಎಲ್ ರಾಹುಲ್ ಮತ್ತೊಂದು ಕಡೆ ವಿಕೆಟ್ ಬೀಳದಂತೆ ಎಚ್ಚರಿಕೆಯಿಂದ ಆಡಿದರು. ಅಕ್ಷರ್ ಪಟೇಲ್ 15 ರನ್ ಗಳಿಸಿ ಔಟಾದರು.
ಟ್ರಿಸ್ಟಾನ್ ಸ್ಟಬ್ಸ್ 23 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರು. ಕೆಎಲ್ ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ 6 ಸಿಕ್ಸರ್ ಸಹಿತ ಅಜೇಯ 93 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವು ತಂದುಕೊಟ್ಟರು. ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಸುಯಾಶ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಆರ್ ಸಿಬಿ ಹೊರಗಡೆ ಮೂರು ಪಂದ್ಯಗಳನ್ನು ಗೆದ್ದಿದ್ದು ತವರಿನಲ್ಲಿ ಆಡಿದ 2 ಪಂದ್ಯಗಳನ್ನು ಸೋತಿದೆ. ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು ಏಪ್ರಿಲ್ 13 ರಂದು ಜೈಪುರದಲ್ಲಿ ಈ ಪಂದ್ಯ ನಡೆಯಲಿದೆ.












Click it and Unblock the Notifications