Asia Cup 2023: ಈ ಇಬ್ಬರು ಪ್ರಮುಖ ಆಟಗಾರರು ಆಡೋದೆ ಅನುಮಾನ!
ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಸನಿಹವಾಗುತ್ತಿರುವ ಬೆನ್ನಲ್ಲೇ ಭಾರತಕ್ಕೆ ಮತ್ತೆ ಆಟಗಾರರ ಗಾಯದ ಸಮಸ್ಯೆ ಶುರುವಾಗಿದೆ. 2022ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ಕೂಡ ಭಾರತಕ್ಕೆ ಆಟಗಾರರ ಗಾಯದ ಸಮಸ್ಯೆ ಕಾಡಿತ್ತು. ಬುಮ್ರಾ ಅನುಪಸ್ಥಿತಿ ತಂಡಕ್ಕೆ ಹಿನ್ನಡೆಯಾಗಲು ಕಾರಣವಾಗಿತ್ತು.
ಈಗ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಸಮೀಪಿಸುತ್ತಿದ್ದು ಗಾಯಗೊಂಡಿರುವ ಪ್ರಮುಖ ಆಟಗಾರರು ಫಿಟ್ ಆಗುವ ಬಗ್ಗೆ ಅನುಮಾನ ಶುರುವಾಗಿದೆ. ತಂಡದ ಪ್ರಮುಖ ಬ್ಯಾಟರ್ ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಷ್ಯಾಕಪ್ 2023ರ ವೇಳೆಗೆ ಫಿಟ್ ಆಗುವುದು ಅನುಮಾನ ಎಂದು ಹೇಳಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಇಬ್ಬರೂ ಆಟಗಾರರು ಗಾಯದ ಸಮಸ್ಯೆ ಅನುಭವಿಸಿದ್ದರು. ಶ್ರೇಯಸ್ ಅಯ್ಯರ್ ಒಂದೂ ಪಂದ್ಯವನ್ನು ಆಡಲಿಲ್ಲ, ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಎಲ್ ರಾಹುಲ್ ಐಪಿಎಲ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು.
ಏಷ್ಯಾಕಪ್‌ನಲ್ಲಿ ಆಡೋದು ಅನುಮಾನ
ಇಬ್ಬರೂ ಆಟಗಾರರು ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದು ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗುಳಿಯುವುದು ಬಹುತೇಕ ಅನುಮಾನವಾಗಿದೆ. ಕೆಎಲ್ ರಾಹುಲ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ (ಎನ್‌ಸಿಎ) ನಲ್ಲಿದ್ದು ಪುನರ್ವಸತಿ ಮುಂದುವರೆಸಿದ್ದಾರೆ. ಶ್ರೇಯಸ್ ಅಯ್ಯರ್ ಮಾತ್ರ ಇನ್ನೂ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇನ್ನು ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಕೂಡ ಅವರ ಫಿಟ್‌ನೆಸ್ ಮೇಲೆ ನಿಂತಿದೆ. ಜೂನ್ 27ರಂದು ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ ಮಾಡಲಿದ್ದು, ಆಗಸ್ಟ್ 29ರೊಳಗೆ ತಂಡದ ಆಟಗಾರರ ಪಟ್ಟಿಯನ್ನು ಐಸಿಸಿಗೆ ನೀಡಬೇಕಿದೆ. ಇದಕ್ಕೂ ಮೊದಲೇ ಇಬ್ಬರೂ ಆಟಗಾರರು ಫಿಟ್‌ನೆಸ್ ಸಾಬೀತುಪಡಿಸಿದರೆ ಮಾತ್ರ ವಿಶ್ವಕಪ್‌ನಲ್ಲಿ ಆಡಬಹುದಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ಅವರು ತಮ್ಮ ಚೇತರಿಕೆ ಮುಂದುವರೆಸಿದ್ದಾರೆ.
ಚೇತರಿಕೆ ಹಾದಿಯಲ್ಲಿ ಜಸ್ಪ್ರೀತ್ ಬುಮ್ರಾ
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸದ್ಯ 70 ಪ್ರತಿಶತ ಫಿಟ್ ಆಗಿದ್ದು, ಭಾರತ ತಂಡದ ಐರ್ಲೆಂಡ್ ಪ್ರವಾಸಕ್ಕೆ ತೆರಳಲು ಸಿದ್ದತೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ವಾಪಸಾತಿ ಮಾಡಲು ಅವರು ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ.
ಯುವ ಆಟಗಾರರಿಗೆ ಅವಕಾಶ
ಪ್ರಮುಖ ಆಟಗಾರರ ಗಾಯದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಭರವಸೆಯ ಆಟಗಾರರಿಗೆ ಅವಕಾಶ ನೀಡಲು ಮುಂದಾಗಿದೆ. ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.












Click it and Unblock the Notifications