Breaking: ಚಿನ್ನಕ್ಕೆ ಮುತ್ತಿಟ್ಟ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು
ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ಅಂತರದಿಂದ ಗೆದ್ದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಮೊದಲ ಸಿಂಗಲ್ಸ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲಿ ಅವರ ವಿರುದ್ಧ ಪಿವಿ ಸಿಂಧು ಕಣಕ್ಕಿಳಿದಿದ್ದರು.
ಪಿ.ವಿ ಸಿಂಧು ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ಶುಭ ಹಾರೈಸಿದ್ದಾರೆ.
"ಪಿವಿ ಸಿಂಧು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಬ್ಯಾಡ್ಮಿಂಟನ್ ಚಿನ್ನ ಗೆಲ್ಲುವ ಮೂಲಕ ರಾಷ್ಟ್ರದ ಹೃದಯವನ್ನು ಗೆದ್ದಿದ್ದಾರೆ. ನೀವು ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಮ್ಯಾಜಿಕ್ ಸೃಷ್ಟಿಸಿದ್ದೀರಿ, ಲಕ್ಷಾಂತರ ಜನರನ್ನು ಆಕರ್ಷಿಸಿದ್ದೀರಿ. ನಿಮ್ಮ ಗೆಲುವು ನಮ್ಮ ತಿರಂಗಾವನ್ನು ಎತ್ತರಕ್ಕೆ ಹಾರುವಂತೆ ಮಾಡುತ್ತದೆ. ನಮ್ಮ ರಾಷ್ಟ್ರಗೀತೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರತಿಧ್ವನಿಸುತ್ತದೆ. ಹೃತ್ಪೂರ್ವಕ ಅಭಿನಂದನೆಗಳು!," ಎಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಕೂಡ ಚಿನ್ನದ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ತಾರೆಯನ್ನು ಅಭಿನಂದಿಸಿದ್ದಾರೆ. ಪಿ.ವಿ ಸಿಂಧು ಚಾಂಪಿಯನ್‌ಗಳ ಚಾಂಪಿಯನ್! ಶ್ರೇಷ್ಠತೆ ಏನೆಂದು ಅವರು ಪದೇ ಪದೇ ತೋರಿಸುತ್ತಿದ್ದಾರೆ. ಆಕೆಯ ಸಮರ್ಪಣೆ ಮತ್ತು ಬದ್ಧತೆ ವಿಸ್ಮಯಕಾರಿಯಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಇದು CWG 2022 ರ ಅಂತಿಮ ದಿನವಾಗಿದೆ. ಭಾರತವು ಐದು ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿತ್ತು. ಇದೊಂದೆ ದಿನ ನಾಲ್ಕು ಚಿನ್ನದ ಪದಕಗಳನ್ನು ಬಾಚಿಕೊಂಡಿದೆ.

ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಕೂಡ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಕೂಡ ತಮ್ಮ ಫೈನಲ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಸಂಜೆಯ ನಂತರ ಪುರುಷರ ಹಾಕಿ ತಂಡವು ಚಿನ್ನದ ಪದಕಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
ಟೇಬಲ್ ಟೆನಿಸ್‌ನಲ್ಲಿ ಅಚಂತ ಶರತ್ ಕಮಲ್ ಅವರು ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚಿನ್ನ ಗೆದ್ದಿದ್ದಾರೆ.












Click it and Unblock the Notifications