RCB:'ಇದು ಆರ್‌ಸಿಬಿ ಹೊಸ ಅಧ್ಯಾಯ', ನಿನ್ನೆ ಮ್ಯಾಚ್ ನೋಡಿ ಸಿದ್ದರಾಮಯ್ಯ ಫುಲ್ ಖುಷ್
ಬೆಂಗಳೂರು, ಮೇ 19: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದೆ. ಈ ಖುಷಿಯನ್ನು ಸಂಪೂರ್ಣ ಕರ್ನಾಟಕವೇ ಸಂಭ್ರಮಿಸುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆರ್‌ಸಿಬಿ ಗೆಲುವಿನ ಖುಷಿಯನ್ನು ನಾಡಿನ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಿದ ಸಿದ್ದರಾಮಯ್ಯ, ರೋಚಕ ಗೆಲುವಿನೊಂದಿಗೆ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿರುವ ಆರ್‌ಸಿಬಿ ತಂಡವನ್ನು ಕೊಂಡಾಡಿದ್ದಾರೆ.

ಆರ್‌ಸಿಬಿ ಗೆಲುವಿನ ನಂತರ ಟ್ವೀಟ್ ಮೂಲಕ ಖುಷಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಸತತ 6ನೇ ಗೆಲುವಿನೊಂದಿಗೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. ನಮ್ಮ ಆರ್‌ಸಿಬಿ ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ. ಇದು ಆರ್.ಸಿ.ಬಿಯ ಹೊಸ ಅಧ್ಯಾಯ' ಎಂದು ಬರೆದುಕೊಂಡಿದ್ದಾರೆ.
ಇನ್ನು ಪಂದ್ಯದ ವೇಳೆ ಆರ್‌ಸಿಬಿ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಸ್ಯಾಂಡಲ್‌ವುಡ್ ಸ್ಟಾರ್ ಶಿವರಾಜ್ ಕುಮಾರ್ ಕೂಡ ಬೆಂಬಲ ನೀಡಿದರು. ಆರ್‌ಸಿಬಿ ಜರ್ಸಿ ಧರಿಸಿಕೊಂಡು ಶಿವಣ್ಣ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಈ ವೇಳೆ ಸಂಪುಟ ದರ್ಜೆಯ ಸಚಿವರು ಹಾಗೂ ಅಧಿಕಾರಿಗಳು ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಐಪಿಎಲ್ ಪಂದ್ಯವನ್ನು ವೀಕ್ಷಿಸಿದರು.

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 14 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಮೊದಮೊದಲು ಸತತ ಸೋಲುಗಳನ್ನು ಕಂಡಿತ್ತು. ಇದರಿಂದ ಅಭಿಮಾನಿಗಳ ಈ ಸಲ ಕಪ್ ನಮ್ಮದೇ ಎನ್ನುವ ಕನಸು ಭಗ್ನವಾಯಿತು ಎನ್ನುವಷ್ಟರಲ್ಲಿ..ಆರ್‌ಸಿಬಿ ತಂಡದಲ್ಲಿ ಹೊಸ ಹುರುಪಿನೊಂದಿಗೆ ಹೊಸ ಅಧ್ಯಾಯ ಆರಂಭವಾಗಿದ್ದು, ಇದೀಗ ಮತ್ತೆ ಸತತ ಆರು ನಿರಂತರ ಗೆಲುವುಗಳ ಮೂಲಕ ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ.












Click it and Unblock the Notifications