ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಲವ್ಯ ಪ್ರಶಸ್ತಿ ಪಡೆದ ಚಿತ್ರದುರ್ಗದ ದ್ವಿತೀಯ ಬಿಎ ವಿದ್ಯಾರ್ಥಿನಿ ವಿ.ರಾಧಾ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಆಗಸ್ಟ್‌, 29: ಕೋಟೆ ನಾಡು ಚಿತ್ರದುರ್ಗದ ವಿದ್ಯಾರ್ಥಿನಿಯೊಬ್ಬಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಏಕಲವ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಬೊಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ಆದ ವಿ.ರಾಧಾ ಬೆಂಗಳೂರಿನ ಕೆಆರ್ ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದು, ಇವರು ಏಕಲವ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಶಸ್ತಿ ವಿಜೇತೆ ವಿ.ರಾಧಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಕ್ರೀಡಾಪಟುಗಳಿಗೆ ರಾಜ್ಯದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಆದ ಏಕಲವ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಏಕಲವ್ಯ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿನಿ ವಿ.ರಾಧ ಆಯ್ಕೆ ಆಗಿದ್ದಾರೆ. 2020ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ವಿ.ರಾಧ ಅವರಿಗೆ ಇಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರಾಧಾ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಸ್ನೇಹಿತರು ಭಾಗವಹಿಸಿದ್ದರು.

ಬಸವರಾಜ ಬೊಮ್ಮಾಯಿ ಅವರು ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಗ್ರಾಮೀಣ ಕ್ರೀಡೋತ್ಸವ ಹಾಗೂ ಯೋಗಾಥಾನ್‌ಗೆ ಚಾಲನೆ ನೀಡಿದರು. 2020ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಹಾಗೂ 2021- 22ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಮಾಡಿದರು.

 ಮುಂದಿನ ಪ್ಯಾರೀಸ್ ಒಲಿಂಪಿಕ್ಸ್‌ಗೆ ತಯಾರಿ

ಮುಂದಿನ ಪ್ಯಾರೀಸ್ ಒಲಿಂಪಿಕ್ಸ್‌ಗೆ ತಯಾರಿ

ಮುಂದಿನ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ರಾಜ್ಯದ ಆಯ್ದ 75 ಕ್ರೀಡಾಪಟುಗಳಿಗೆ ವಿಶ್ವಮಟ್ಟದ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಹಲವರು ಒಲಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲಬೇಕೆಂಬುದು ಸರ್ಕಾರದ ಗುರಿ ಆಗಿದೆ. ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಸಾಧನೆಗಳಾಗಬೇಕು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಸರ್ಕಾರದ ವತಿಯಿಂದ ವ್ಯವಸ್ಥಿತವಾಗಿ ನಡೆಸಲಾಗುವುದು. ಈ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಕಬ್ಬಡಿ, ಕೋ ಕೋ, ಕಂಬಳ, ಎತ್ತಿನ ಗಾಡಿ ಸ್ಪರ್ಧೆ, ಹೀಗೆ ಹಲವು ಕ್ರೀಡೆಗಳು ಗ್ರಾಮೀಣ ಪ್ರದೇಶದ ಸೊಗಡನ್ನು ಹೆಚ್ಚಸುತ್ತವೆ. ಗ್ರಾಮ ಪಂಚಾಯತಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡೆಗಳು ನಡೆಯುತ್ತವೆ. ಗ್ರಾಮ ಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ ಎಂದರು.

 ಯುವಕರ ಸಾಮರ್ಥ್ಯ ಹೆಚ್ಚಿಸಲು ನಿರಂತರ ಶ್ರಮ

ಯುವಕರ ಸಾಮರ್ಥ್ಯ ಹೆಚ್ಚಿಸಲು ನಿರಂತರ ಶ್ರಮ

ಯುವಜನ ಸಬಲೀಕರಣಕ್ಕಾಗಿ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಬಹಳ ಮುಖ್ಯ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಆಗಸ್ಟ್ 15ಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಗ್ರಾಮದಲ್ಲಿ 30 ಜನರ ಯುವಜನರ ಸಂಘವನ್ನು ಗುರುತಿಸಿ, 7.5 ಲಕ್ಷದಿಂದ 10 ಲಕ್ಷದವರೆಗೆ ಯೋಜನೆಗಳನ್ನು ರೂಪಿಸಲಾಗುವುದು. ಸಂಘಕ್ಕೆ 1.5 ಲಕ್ಷ ಅನುದಾನವನ್ನು ಸರ್ಕಾರವೇ ಭರಿಸಲಿದೆ. ಉತ್ಪನ್ನಗಳ ತಯಾರಿಕೆಗೆ ತರಬೇತಿ, ತಯಾರಿಕೆ ಹಾಗೂ ಮಾರುಕಟ್ಟೆ ಜೋಡಣೆಯನ್ನು ಕಲ್ಪಿಸುವ ಯೋಜನೆ ಇದಾಗಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ ಒಂದು ವರ್ಷಕ್ಕೆ ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಇದು ವಿನೂತನವಾದ ಯೋಜನೆ ಆಗಿದೆ. ಸರ್ಕಾರ ಆರ್ಥಿಕ, ಸಾಮಾಜಿಕವಾಗಿ ಯುವಕರ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಕೆಲಸವನ್ನು ನಿರಂತರವಾಗಿ ಮಾಡುತ್ತದೆ ಎಂದರು.

 ಹಾಕಿ ಮಾಂತ್ರಿಕನ ಇತಿಹಾಸ ಬಿಚ್ಚಿಟ್ಟ ಸಿಎಂ

ಹಾಕಿ ಮಾಂತ್ರಿಕನ ಇತಿಹಾಸ ಬಿಚ್ಚಿಟ್ಟ ಸಿಎಂ

ಹಾಕಿ ಮಾಂತ್ರಿಕನಾದ ಧ್ಯಾನ್‍ಚಂದ್ ಅವರು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದು, ದೇಶಕ್ಕೆ ಕೀರ್ತಿ ತಂದವರಾಗಿದ್ದಾರೆ. ಹಾಕಿ ಮಾಂತ್ರಿಕರಾಗಿದ್ದ ಅವರು ಹಾಕಿ ಕ್ರೀಡೆಯನ್ನು ಅಗ್ರ ಸ್ಥಾನಕ್ಕೆ ತಂದಿದ್ದರು. ಧ್ಯಾನ್‌ಚಂದ್ ಅವರ ಹೆಸರಿನಲ್ಲಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಏಕಲವ್ಯ ಪ್ರಶಸ್ತಿ, ಕ್ರೀಡಾ ರತ್ನ ಪ್ರಶಸ್ತಿ, ನಗದು ಪ್ರಶಸ್ತಿ ನೀಡಲಾಗುತ್ತಿದೆ. ಕ್ರೀಡಾ ಪಟುಗಳ ಶ್ರಮ, ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಭಾರತದಲ್ಲಿ ಶೇಕಡಾ 46ರಷ್ಟು ಜನಸಂಖ್ಯೆ ಯುವಜನರಿದ್ದಾರೆ. ಮುಂದಿನ 25 ವರ್ಷಗಳು ಭಾರತದ ಭವಿಷ್ಯ ಈ ಯುವಜನತೆಯ ಮೇಲಿದೆ ಎಂದು ತಿಳಿಸಿದರು.

 ಸಾಧನೆಯ ಮೈಲುಗಲ್ಲು ತಲುಪುವ ಸೂತ್ರ ಹೇಳಿದ ಸಿಎಂ

ಸಾಧನೆಯ ಮೈಲುಗಲ್ಲು ತಲುಪುವ ಸೂತ್ರ ಹೇಳಿದ ಸಿಎಂ

ಯುವಕರಲ್ಲಿ ಶಿಸ್ತು, ವ್ಯಕ್ತಿತ್ವದಿಂದ ಯಶಸ್ಸು ಬರುತ್ತದೆ. ಕಠಿಣ ಪರಿಶ್ರಮಗಳಿಂದ ಹೆಚ್ಚಿನ ಗುರಿಗಳನ್ನು ಮುಟ್ಟುವಲ್ಲಿ ಸಾಧ್ಯ ಆಗುತ್ತದೆ. ಗೆಲ್ಲಬೇಕು ಎಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ಬದಲಾಗಿ ಸೋಲಬಾರದು ಎಂದು ಆಟ ಆಡಬಾರದು. ಗೆಲ್ಲಬೇಕೆಂಬ ಛಲದಿಂದ ಸಕಾರಾತ್ಮಕವಾಗಿ ಆಡಬೇಕು. ಆತ್ಮವಿಶ್ವಾಸದಿಂದ ನಿಮ್ಮ ಮೇಲೆ ನಂಬಿಕೆ ಇರಿಸಿ. ಯುವಕರು ಸಾಧನೆಗಳನ್ನು ಮಾಡಿದಾಗ ಹುರಿದುಂಬಿಸಿದರೆ, ಇನ್ನಷ್ಟು ಸಾಧನೆಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಮೌಂಟ್ ಎವರೆಸ್ಟ್ ಜಗತ್ತಿನ ಅತಿ ಎತ್ತರದ ಶಿಖರವಾಗಿದೆ. ಹಿಮಾಲಯದ ತಪ್ಪಲಿನಲ್ಲಿ ತೇನ್ ಸಿಂಗ್ ಎಂಬಾತ ಕುರಿ ಕಾಯುವವರ ಜನಾಂಗದಲ್ಲಿ ಚಿಕ್ಕ ಹುಡುಗನಾಗಿದ್ದ. ಈತ ತನ್ನ 42ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಅನ್ನು ಹತ್ತಿ ಭಾರತದ ಧ್ವಜವನ್ನು ನೆಟ್ಟು ಇಡೀ ದೇಶದ ಮೆಚ್ಚುಗೆಗೆ ಪಾತ್ರನಾಗಿದ್ದ. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಂಕಲ್ಪವನ್ನು ಯಶಸ್ವಿಯಾಗಿ ಸಾಕಾರಗೊಳಿಸಿದ್ದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಮೊದಲು ಧೃಡ ನಿರ್ಧಾರ ಮಾಡಬೇಕು ಎಂದು ಮುಖ್ಯಮಂತ್ರಿಗಳು ಯುವಕರಿಗೆ ಕಿವಿಮಾತನ್ನು ಹೇಳಿದರು.

English summary
student V Radha of Bommasandra village in Chitradurga district, received Eklavya award today, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X