ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಖುಲಾಸೆ; ವಿನೇಶ್ ಫೋಗಟ್ ಅಸಮಾಧಾನ
Brij Bhushan Sharan Singh: ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಬಿಜೆಪಿ ಮಾಜಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿ ನ್ಯಾಯಾಲಯವು ಸೋಮವಾರ (ಆಗಸ್ಟ್ 03) ಖುಲಾಸೆಗೊಳಿಸಿದೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಶ್ವಿನ್ ಪನ್ವಾರ್ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ ಪ್ರಕರಣದ ಎರಡನೇ ಆರೋಪಿ ಆಗಿದ್ದ ಡಬ್ಲ್ಯೂಎಫ್‌ಐ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರ ಮೇಲಿದ್ದ ಆರೋಪಗಳನ್ನೂ ನ್ಯಾಯಾಲಯ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಎಫ್‌ಐಆರ್ ದಾಖಲಿಸಿದ್ದ ದೆಹಲಿ ಪೊಲೀಸರು
ಪ್ರಾಸಿಕ್ಯೂಷನ್ ಸಲ್ಲಿಕೆ ಮಾಡಿದ್ದ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆದರೆ ತೀರ್ಪಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್ ಅವರ ಪರ ವಕೀಲರು, 'ಇದೊಂದು ಗೌರವಾನ್ವಿತ ಖುಲಾಸೆ,' ಎಂದು ಸ್ಪಷ್ಟಪಡಿಸಿದ್ದಾರೆ. 6 ಮಂದಿ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ದೂರುಗಳ ಆಧಾರದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು.
ಯಾವೆಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲು?
ಚಾರ್ಜ್‌ಶೀಟ್ ಸಲ್ಲಿಕೆ (ಜೂನ್ 15, 2023): ದೆಹಲಿ ಪೊಲೀಸರು ತನಿಖೆ ನಡೆಸಿ ಐಪಿಸಿ ಸೆಕ್ಷನ್ 354 (ಮಹಿಳೆಯ ಮಾನಭಂಗ), 354A, 354D (ಹಿಂಬಾಲಿಸುವುದು/ಸ್ಟಾಕಿಂಗ್) ಹಾಗೂ 506(1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು (ಚಾರ್ಜ್‌ಶೀಟ್) ಸಲ್ಲಿಕೆ ಮಾಡಿದ್ದರು.
ಮೇ 10, 2024ರಂದು ಐವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 354 ಮತ್ತು 354A ಅಡಿಯಲ್ಲಿ ಹಾಗೂ ಇಬ್ಬರು ಕುಸ್ತಿಪಟುಗಳಿಗೆ ಬೆದರಿಕೆ ಹಾಕಿದ ಸಂಬಂಧ ಸೆಕ್ಷನ್ 506(1) ಅಡಿಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ದೋಷಾರೋಪ ಮಾಡಲು ಸಾಕ್ಷ್ಯಾಧಾರಗಳಿವೆ ಎಂದು ವಿಚಾರಣಾ ನ್ಯಾಯಾಲಯ ಹೇಳಿತ್ತು. ಜೊತೆಗೆ ಸಂತ್ರಸ್ತೆಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ವಿನೋದ್ ತೋಮರ್ ವಿರುದ್ಧವೂ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿತ್ತು.
ಈ ಸುದೀರ್ಘ ವಿವಾದದ ಆರಂಭದಲ್ಲಿ ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟುವೊಬ್ಬರು ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿದ್ದರು. ಆದರೆ ತದನಂತರ ಅವರು ತಮ್ಮ ದೂರನ್ನು ಹಿಂಪಡೆದಿದ್ದರು. ಈ ಹಿನ್ನೆಲೆ ದೆಹಲಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ರದ್ದತಿ ವರದಿ ಸಲ್ಲಿಕೆ ಮಾಡಿದ್ದರು. ಆ ಪ್ರಕರಣವನ್ನು ನ್ಯಾಯಾಲಯವು ಈಗಾಗಲೇ ಮುಕ್ತಾಯಗೊಳಿಸಿತ್ತು.
ಈ ಪ್ರಮುಖ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪರವಾಗಿ ವಕೀಲರಾದ ರಾಜೀವ್ ಮೋಹನ್, ರಿಷಭ್ ಭಾಟಿ, ರೆಹಾನ್ ಖಾನ್ ಹಾಗೂ ಸೂರ್ಯಾಂಶ್ ಸಿಂಗ್ ಅವರು ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದರು. ಇದೀಗ ಪ್ರಕರಣ ಖುಲಾಸೆಗೊಳಿಸಿದ ಬೆನ್ನಲ್ಲೇ ಬ್ರಿಜ್ ಭೂಷಣ್ ಪ್ರತಿಕ್ರಿಯೇ ನೀಡಿದ್ದಾರೆ.
'ಆರಂಭದಿಂದಲೂ ನಾನು ಹೇಳಿದಂತೆ, ನನ್ನ ಮೇಲಿನ ಯಾವುದೇ ಆರೋಪ ಸಾಬೀತಾದರೆ ನಾನು ಗಲ್ಲಿಗೇರಲು ಸಿದ್ಧನಿದ್ದೆ. ನ್ಯಾಯಾಲಯ ನನ್ನನ್ನು ಗೌರವಯುತವಾಗಿ ಖುಲಾಸೆಗೊಳಿಸಿದೆ. ನನಗೆ ತುಂವಾ ಸಂತೋಷವಾಗಿದೆ,' ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ವಿನೇಶ್ ಫೋಗಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿನೇಶ್ ಫೋಗಟ್ ಅಸಮಾಧಾನ
'ನ್ಯಾಯಾಲಯದ ಈ ತೀರ್ಪಿನಿಂದ ನಮಗೆ ತುಂಬಾ ನಿರಾಶೆಯಾಗಿದೆ. ಆರಂಭದಿಂದಲೂ ಸರ್ಕಾರ ಮತ್ತು ಇಡೀ ವ್ಯವಸ್ಥೆ ಬ್ರಿಜ್ ಭೂಷಣ್ ಅವರನ್ನು ರಕ್ಷಿಸಲು ಕೆಲಸ ಮಾಡುತ್ತಿತ್ತು. ಆದರೆ ನಾವು ನಮ್ಮ ಹೋರಾಟವನ್ನು ಕೈಬಿಡುವುದಿಲ್ಲ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ,' ಎಂದು ವಿನೇಶ್ ಫೋಗಟ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications
