ಬೆಂಗಳೂರು ಎಂ.ಚಿನ್ನಸ್ವಾಮಿ ಸ್ಟೇಡಿಯಂನ ಎರಡು ಸ್ಟ್ಯಾಂಡ್‌ಗಳಿಗೆ ಕನ್ನಡಿಗ ಕ್ರಿಕೆಟರ್ಸ್ ಹೆಸರು ನಾಮಕರಣ
ಬೆಂಗಳೂರು, ಫೆಬ್ರವರಿ 14: ಇತ್ತೀಚೆಗಷ್ಟೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಪಂದ್ಯಗಳನ್ನು ಆಡಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಈ ಸ್ಟೇಡಿಯಂನ ಸುವರ್ಣ ಮಹೋತ್ಸವ ಹಿನ್ನೆಲೆ ಕೆಎಸ್‌ಸಿಎ ಇಲ್ಲಿನ ಎರಡು ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಕ್ರಿಕೆಟ್ ದಿಗ್ಗಜರ ಹೆಸರನ್ನು ನಾಮಕರಣ ಮಾಡಲಾಗಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದರು. ಈ ಹಿನ್ನೆಲೆ ಆಗಿನಿಂದ ಈ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳನ್ನು ಆಡಿಸದಂತೆ ನಿಷೇಧ ಹೇರಲಾಗಿತ್ತು. ಆದರೆ, ಇದೀಗ ರಾಜ್ಯ ಸಚಿವ ಸಂಪುಟ ಇಲ್ಲಿ ಪಂದ್ಯಗಳನ್ನು ಆಡಿಸಲು ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಇಲ್ಲಿನ ಎರಡು ಸ್ಟ್ಯಾಂಡ್‌ಗಳಿಗೆ ಕನ್ನಡಿಗರ ಹೆಸರನ್ನು ಇಡಲಾಗಿದೆ.

ಎರಡು ಸ್ಟ್ಯಾಂಡ್‌ಗಳಿಗೆ ಕನ್ನಡಿಗರ ಹೆಸರು ನಾಮಕರಣ
ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಅವರ ಹೆಸರನ್ನು ಇಡುವ ಮೂಲಕ ಗೌರವಿಸಲಾಗಿದೆ. ಫೆಬ್ರವರಿ 13ರ ಶುಕ್ರವಾರ ನಡೆದ ವಿಶೇಷ ಸಮಾರಂಭದಲ್ಲಿ ಕೆಎಸ್‌ಸಿಎ ಈ ನಾಮಕರಣ ಮಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣ ಮಹೋತ್ಸವದ ಸಂಭ್ರಮದ ಭಾಗವಾಗಿದ್ದ ಈ ಕಾರ್ಯಕ್ರಮದ ಮೂಲಕ ಮೂರು ಸ್ಟ್ಯಾಂಡ್‌ಗಳಿಗೆ ಮಾಜಿ ಕ್ರಿಕೆಟರ್‌ಗಳ ಹೆಸರಿಡುವುದಾಗಿ ಘೋಷಿಸಲಾಯಿತು.
ಕನ್ನಡಿಗರ ಹೆಸರು ನಾಮಕರಣ
* ಅನಿಲ್ ಕುಂಬ್ಳೆ
* ರಾಹುಲ್ ದ್ರಾವಿ
ಯಾವ ಸ್ಟ್ಯಾಂಡ್‌ಗೆ ಯಾರ ಹೆಸರು?
ಪೆವಿಲಿಯನ್ ಎಂಡ್ ಕಡೆಯ ಸ್ಟ್ಯಾಂಡ್ ಅನಿಲ್ ಕುಂಬ್ಳೆ ಎಂಡ್ ಎಂದು ಕರೆಯಲ್ಪಡುತ್ತದೆ. ನಾರ್ತ್ ಎಂಡ್ ಸ್ಟ್ಯಾಂಡ್ ಇನ್ಮುಂದೆ ರಾಹುಲ್ ದ್ರಾವಿಡ್ ಎಂಡ್ ಎಂದು ಕರೆಯಲ್ಪಡುತ್ತದೆ. ಕ್ರೀಡಾಂಗಣದ ಮತ್ತೊಂದು ಸ್ಟ್ಯಾಂಡ್‌ಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಪ್ರಮುಖ ವಿಶೇಷತೆಗಳು
ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಮೈದಾನಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ ಪಂದ್ಯಗಳಿಗೆ ಈ ಮೈದಾನ ಪ್ರಮುಖ ಕೇಂದ್ರವಾಗಿದ್ದು, ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಅತ್ಯಾಧುನಿಕ ಸಬ್ ಏರ್ ಸಿಸ್ಟಮ್ ಹೊಂದಿದೆ. ಅಂದರೆ, ಮಳೆ ಬಂದು ಮೈದಾನದಲ್ಲಿ ನೀರು ನಿಂತರೆ, ಕೇವಲ 15-20 ನಿಮಿಷಗಳಲ್ಲಿ ಸಬ್ ಏರ್ ಸಿಸ್ಟಮ್ ಮೂಲಕ ಗ್ರೌಂಡ್ನಲ್ಲಿರುವ ನೀರನ್ನು ಸಂಪೂರ್ಣವಾಗಿ ಹೊರಗೆ ಹಾಕುವ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಈ ಮೂಲಕ 15 ರಿಂದ 20 ನಿಮಿಷಗಳಲ್ಲಿ ಪಂದ್ಯವನ್ನು ಪುನರಾರಂಭಿಸಬಹುದು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣ ನವೀಕರಣ ಕಾರ್ಯಗಳು ಪೂರ್ಣಗೊಂಡ ಬಳಿಕ 2026ರಿಂದ ಮತ್ತೆ ಪ್ರಮುಖ ಕ್ರಿಕೆಟ್ ಪಂದ್ಯಗಳಿಗೆ ವೇದಿಕೆಯಾಗಲಿದೆ. ಈ ಹಿನ್ನೆಲೆ ಐಪಿಎಲ್ 2026 ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಅದರಂತೆಯೇ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿವೆ. ನವೀಕರಣದ ಮೂಲಕ ಪ್ರೇಕ್ಷಕರಿಗೆ ಉತ್ತಮ ಸೌಲಭ್ಯಗಳು ಹಾಗೂ ಆಟಗಾರರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇನ್ನೂ ಇಲ್ಲಿ ಐಪಿಎಲ್‌ಗೆ ಅನುಮತಿ ನೀಡಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.












Click it and Unblock the Notifications