Bengaluru Bulls: ಕೊನೆ ಪಂದ್ಯದಲ್ಲಿ ಅಬ್ಬರಿಸಿದ ಗೂಳಿಗಳು; ಹರಿಯಾಣ ಸ್ಟೀಲರ್ಸ್ ವಿರುದ್ಧ 53-39 ಅಂಕಗಳ ಗೆಲುವು
ಪ್ರೊ ಕಬಡ್ಡಿ ಲೀಗ್ ಸೀಸನ್ 10 ರ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಅಬ್ಬರಿಸಿದೆ. ಈ ಆವೃತ್ತಿಯ ಕೊನೆಯ ಪಂದ್ಯವನ್ನಾಡಿದ ಬುಲ್ಸ್ ಪಡೆ ಗೆಲುವಿನ ಮೂಲಕ ವಿದಾಯ ಹೇಳಿದೆ.
ಪಂಚಕುಲದ ತೌ ದೇವಿಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ದ್ವಿತೀಯಾರ್ಧದಲ್ಲಿ ಅಬ್ಬರದ ಪ್ರದರ್ಶನ ನೀಡಿದೆ. ರೈಡರ್ ಗಳಾದ ಸುಶೀಲ್ ಮತ್ತು ಅಕ್ಷತ್ ಹರಿಯಾಣ ಸ್ಟೀಲರ್ಸ್ ರಕ್ಷಣಾ ಕೋಟೆಯನ್ನು ಪುಡಿಗಟ್ಟಿದರು.ಅಂತಿಮವಾಗಿ ಬೆಂಗಳೂರು ಬುಲ್ಸ್ 53-39 ಅಂಕಗಳಿಂದ ಭರ್ಜರಿ ಗೆಲುವು ಪಡೆಯಿತು.

ಮೊದಲಾರ್ಧದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಮೊದಲಾರ್ಧದ ಅಂತ್ಯದ ವೇಳೆಗೆ 24-24 ಪಾಯಿಂಟ್ ಪಡೆಯುವ ಮೂಲಕ ಪಂದ್ಯ ರೋಚಕ ಹಂತಕ್ಕೆ ಬಂದಿತ್ತು.
ದ್ವಿತೀಯಾರ್ಧದಲ್ಲಿ ಮಂಕಾದ ಹರಿಯಾಣ
ಆದರೆ ದ್ವಿತೀಯಾರ್ಧದಲ್ಲಿ ಬೆಂಗಳೂರು ಬುಲ್ಸ್ ಪಡೆ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಸುಶೀಲ್ 22 ರೈಡ್ ಅಂಕಗಳನ್ನು ಪಡೆಯುವ ಮೂಲಕ ಬೆಂಗಳೂರು ಬುಲ್ಸ್ ತಂಡದ ಟಾಪ್ ರೈಡರ್ ಎನಿಸಿಕೊಂಡರು. ಅಕ್ಷಿತ್ ರೈಡಿಂಗ್‌ನಲ್ಲಿ8 ಅಂಕಗಳನ್ನು ಪಡೆದುಕೊಂಡರು.
ವಿಖಾಶ್ ಕಂಡಾಲ 1 ರೈಡ್ ಪಾಯಿಂಟ್ ಪಡೆದರು. ಡಿಫೆಂಡರ್ ಗಳಾದ ಅರುಳ್‌ನಾಥಬಾಬು 5 ಅಂಕ ಪಡೆದರೆ, ಪಾರ್ಥಿಬನ್ ಕೂಡ 5 ಅಂಕ ಪಡೆದುಕೊಂಡರು. ರೋಹಿತ್ ಕುಮಾರ್ 4, ರಣ್ ಸಿಂಗ್ 2 ಅಂಕ ಪಡೆದು ಮಿಂಚಿದರು.
ಮೊದಲಾರ್ಧ ಹೋರಾಟ ಕೊಟ್ಟ ಹರಿಯಾಣ ಸ್ಟೀಲರ್ಸ್ ದ್ವಿತೀಯಾರ್ಧ ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲವಾಯಿತು. ರೈಡರ್ ತೇಜಸ್ ಪಾಟೀಲ್ 11 ಅಂಕ ಪಡೆದರೆ, ವಿಶಾಲ್ ತಾಟೆ 8 ಅಂಕ ಪಡೆದುಕೊಂಡರು. ರೈಡರ್ ಗಳು ತಕ್ಕ ಮಟ್ಟಿಗೆ ಪ್ರದರ್ಶನ ನೀಡಿದರು, ಡಿಫೆಂಡ್ ವಿಭಾಗದಲ್ಲಿ ವಿಫಲವಾಗಿದ್ದು ಸೋಲಿಗೆ ಕಾರಣವಾಯಿತು.
ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆಯುವ ಮೂಲಕ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. 22 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಮಾತ್ರ ಗೆದ್ದಿರುವ ಬುಲ್ಸ್ 12 ಪಂದ್ಯಗಳಲ್ಲಿ ಸೋತಿದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಈ ಮೂಲಕ 53 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ಇಂದಿನ ಪಂದ್ಯ ಸೋತರೂ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಹರಿಯಾಣ ಎಲಿಮಿನೇಟರ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪುಣೇರಿ ಪಲ್ತಾನ್ ಮತ್ತು ಎರಡನೇ ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಸೆಮಿಫೈನಲ್ ಪ್ರವೇಶಿಸಿದೆ.












Click it and Unblock the Notifications