ಮ್ಯಾಂಚೆಸ್ಟರ್-ಟ್ರಿನಿಡಾಡ್ ವಿಮಾನ, ಕ್ರಿಕೆಟರ್ಸ್‌ಗಾಗಿ 3.5 ಕೋಟಿ ರು ವ್ಯಯ!
ಲಂಡನ್, ಜುಲೈ 21: ಇಂಗ್ಲೆಂಡ್ ಪ್ರವಾಸ ಮುಗಿಸಿ, ವೆಸ್ಟ್ ಇಂಡೀಸ್‌ನಲ್ಲಿ ಸರಣಿ ಆಡಲು ತೆರಳುತ್ತಿರುವ ಆಟಗಾರರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಚಾರ್ಟೆಡ್ ವಿಮಾನ ವ್ಯವಸ್ಥೆ ಮಾಡಿದೆ. ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ, ಆಟಗಾರರನ್ನು ಮ್ಯಾಂಚೆಸ್ಟರ್‌ನಿಂದ ಟ್ರಿನಿಡಾಡ್‌ಗೆ ಕರೆದೊಯ್ಯಲು ಸುಮಾರು 3.5 ಕೋಟಿ ರು ಖರ್ಚು ಮಾಡಲಾಗಿದೆ ಎಂಬ ಸುದ್ದಿ ಬಂದಿದೆ.
ಆಟಗಾರರಲ್ಲದೆ, ಪತ್ನಿಯರು ಸಹ ಪ್ರಯಾಣಿಸುತ್ತಿದ್ದರಿಂದ ವಿಶೇಷ ವಿಮಾನವನ್ನು ಕಾಯ್ದಿರಿಸಲಾಗಿದೆ ಮತ್ತು ಆದ್ದರಿಂದ ವಾಣಿಜ್ಯ ವಿಮಾನದಲ್ಲಿ ಅನೇಕರಿಗೆ ಬುಕಿಂಗ್ ಮಾಡುವುದು ಕಷ್ಟಕರವಾಗಿದೆ ಎಂಬ ಸಮಜಾಯಿಷಿ ಸಿಕ್ಕಿದೆ.
Trinidad - WE ARE HERE! 👋😃#TeamIndia | #WIvIND pic.twitter.com/f855iUr9Lq
— BCCI (@BCCI) July 20, 2022
''ಮಂಗಳವಾರ ಮಧ್ಯಾಹ್ನ ಮ್ಯಾಂಚೆಸ್ಟರ್‌ನಿಂದ ಪೋರ್ಟ್-ಆಫ್-ಸ್ಪೇನ್‌ಗೆ 11:30 PM IST ಕ್ಕೆ ಟೀಂ ಇಂಡಿಯಾವನ್ನು ಕೊಂಡೊಯ್ದ ಚಾರ್ಟರ್ಡ್ ಫ್ಲೈಟ್‌ಗೆ 3.5 ಕೋಟಿ ರು ಖರ್ಚಾಗಿದೆ. ತಂಡಕ್ಕಾಗಿ ಚಾರ್ಟರ್ಡ್ ಫ್ಲೈಟ್ ಅನ್ನು ಬುಕ್ ಮಾಡಲು ಕಾರಣ ಕೋವಿಡ್ -19 ಅಲ್ಲ, ವಾಣಿಜ್ಯ ವಿಮಾನದಲ್ಲಿ ಇಷ್ಟು ಟಿಕೆಟ್‌ಗಳನ್ನು ಕಾಯ್ದಿರಿಸುವುದು ಕಷ್ಟ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಭಾರತೀಯ ತಂಡವು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ 16 ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿದೆ'' ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

''ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣ ವ್ಯವಸ್ಥೆ ಮಾಡಿದ್ದರೆ ಖರ್ಚು ವೆಚ್ಚ ಸುಮಾರು 2 ಕೋಟಿ ರು ದಾಟುತ್ತಿತ್ತು. ಮ್ಯಾಂಚೆಸ್ಟರ್‌ನಿಂದ ಪೋರ್ಟ್ ಆಫ್ ಸ್ಪೈನ್‌ಗೆ ಬಿಸಿನೆಸ್ ಕ್ಲಾಸ್ ಒಂದು ಟಿಕೆಟ್‌ನ ದರ ಸುಮಾರು ಎರಡು ಲಕ್ಷದಷ್ಟಿದೆ. ಚಾರ್ಟರ್ಡ್ ವಿಮಾನ ಮತ್ತಷ್ಟು ದುಬಾರಿಯಾಗಿದ್ದರೂ ಈ ಸಂದರ್ಭದಲ್ಲಿ ನಮಗೆ ಅನಿವಾರ್ಯವಾಗಿತ್ತು. ಈಗ ಹೆಚ್ಚಿನ ಅಗ್ರ ಫುಟ್ಬಾಲ್ ತಂಡಗಳು ತಮ್ಮ ಪ್ರಯಾಣಕ್ಕಾಗಿ ಚಾರ್ಟರ್ಡ್ ವಿಮಾನಗಳನ್ನು ಹೊಂದಿದೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ToIಗೆ ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ಗೆ ಕೇವಲ ಮೂರು ತಿಂಗಳಷ್ಟೇ ಬಾಕಿಯಿದ್ದು, ಸಶಕ್ತ ಟಿ20 ತಂಡ ಕಟ್ಟುವತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಯೋಜನೆ ಹಾಕಿಕೊಂಡಿದೆ. ಹೀಗಾಗಿ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸಕ್ಕೆ ಪ್ರತ್ಯೇಕ ತಂಡಗಳನ್ನು ಕಳಿಸಲಾಗುತ್ತಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಇಂದು ಟೀಂ ಇಂಡಿಯಾ ಪ್ರಕಟಿಸಲಾಗಿದೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ರವೀಂದ್ರ ಜಡೇಜಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಭಾರತ ವಿರುದ್ಧ ವೆಸ್ಟ್ ಇಂಡೀಸ್ ಟಿ20 ಸರಣಿಗೆ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ (3ನೇ ಟಿ20) ವಿಶ್ರಾಂತಿ ಪಡೆಯಲಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದ ಟಿ20ಐ ಹಾಗೂ ಏಕದಿನ ಸರಣಿಯಿಂದ ಆಟಗಾರರಿಗೆ ವಿಶ್ರಾಂತಿ ನೀಡಲು ಆಯ್ಕೆಗಾರರು ನಿರ್ಧರಿಸಿದ್ದಾರೆ. ಆದರೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಟಗಾರರಿಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕಿದೆ.
3 ಏಕದಿನ ಪಂದ್ಯಗಳಿಗೆ ಭಾರತ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್ ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಜುಲೈ 22ರಂದು ನಡೆಯಲಿದ್ದು, ಜುಲೈ 24 ಹಾಗೂ ಜುಲೈ 27ರಂದು ಉಳಿದೆರಡು ಪಂದ್ಯ ನಿಗದಿಯಾಗಿದೆ. ಜುಲೈ 29ರಿಂದ 5 ಪಂದ್ಯಗಳ ಟಿ20ಐ ಸರಣಿ ಆರಂಭವಾಗಲಿದೆ.












Click it and Unblock the Notifications