ಬೆಂಗಳೂರು ಕಾಲ್ತುಳಿತ ದುರಂತ: ಐಪಿಎಲ್ ವಿಜಯೋತ್ಸವಗಳಿಗೆ ಬಿಸಿಸಿಐನಿಂದ ಹೊಸ ಮಾರ್ಗಸೂಚಿಗಳ ಬಿಡುಗಡೆ
IPL Victory Guidelines: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿತು. ಅಂದು ಬರೀ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶವೇ ರಾಯಲ್ ತಂಡದ ಗೆಲುವಿನ ಸಂಭ್ರಮಾಚರಣೆ ಮಾಡಿತ್ತು. ಆದರೆ, ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ ಇದೀಗ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಐಪಿಎಲ್ ತಂಡಗಳ ವಿಜಯೋತ್ಸವಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ದುರಂತದ ಬಳಿಕ ಈ ಕ್ರಮವನ್ನು ತೆಗೆದುಕೊಂಡಿದೆ.

ಇನ್ಮುಂದೆ ಯಾವುದೇ ಐಪಿಎಲ್ ತಂಡಗಳು ಟ್ರೋಫಿ ಗೆದ್ದ ಬಳಿಕ ಸಂಬಂಧಪಟ್ಟ ತಮ್ಮ ರಾಜ್ಯದಲ್ಲಿ ವಿಜಯೋತ್ಸವ ಆಚರಣೆ ಮಾಡುವುದಕ್ಕೆ ಬಿಸಿಸಿಐನಿಂದ ಮೊದಲೇ ಅನುಮತಿ ಪಡೆಯಬೇಕಾಗುತ್ತದೆ. ಸುರಕ್ಷತೆಗಾಗಿ ಹಲವು ಹಂತದ ಕ್ರಮಗಳನ್ನು ಕಡ್ಡಾಯ ಮಾಡಲಾಗಿದೆ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಬಿಸಿಸಿಐನಿಂದ ಲಿಖಿತ ಅನುಮತಿ ಪಡೆದ ಬಳಿಕವೇ ಆಚರಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ಆಯೋಜನೆತ ಸ್ಥಳದವರೆಗೆ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕೆಂದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
ಆಡಿದ 17 ಸೀಸನ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯಲ್ಲಿ ಮೊಟ್ಟ ಮೊದಲ ಬಾರಿ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಟ್ರೋಫಿಗೆ ಮುತ್ತಿಟ್ಟಿತು. ಈ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಅಂದು ಆರ್‌ಸಿಬಿ ಗೆಲುವನ್ನು ಇಡೀ ದೇಶವೇ ಸಂಭ್ರಮಿಸಿತು.
ಆದರೆ, ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವನ್ನು ಆಯೋಜಿಸಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಈ ದುರಂತ ಆರ್‌ಸಿಬಿಗೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು. ಈ ಸಂಬಂಧ ರಾಜ್ಯ ಸರ್ಕಾರ ಹಲವು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಅಮಾನತುಗೊಳಿಸಿತು. ಅಲ್ಲದೆ, ಕೆಎಸ್‌ಸಿಎ, ಆರ್‌ಸಿಬಿ ವಿರುದ್ಧ ಎಫ್‌ಐಆರ್ ಹಾಗೂ ವಿರಾಟ್ ಕೊಹ್ಲಿ ಮೇಲೂ ದೂರು ದಾಖಲಾಯಿತು.
ಇನ್ನು ದುರಂತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈಗಲೂ ಕೂಡ ಮಕ್ಕಳನ್ನೂ ನೆನೆದು ಕಣ್ಣೀರಿಡುತ್ತಲಿದ್ದಾರೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದು. ಅದಕ್ಕಾಗಿ ಸೂಕ್ತ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಈ ಘಟನೆ ನಡೆದ ಬೆನ್ನಲ್ಲೇ ಬಿಸಿಸಿಐ ತಿಳಿಸಿತ್ತು. ಇದೀಗ ಕೊನೆಗೂ ಐಪಿಎಲ್ ವಿಜಯೋತ್ಸವಕ್ಕೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಐಪಿಎಲ್ ವಿಜಯೋತ್ಸವಕ್ಕೆ ಹೊಸ ಮಾರ್ಗಸೂಚಿಗಳು
* ಐಪಿಎಲ್ ವಿಜೇತ ತಂಡಗಳ ಸಂಭ್ರಮಾಚರಣೆಗೆ ಬಿಸಿಸಿಐ ಅನುಮತಿ ಪಡೆಯಲೇಬೇಕು
* ವಿಜಯೋತ್ಸವ ಕಾರ್ಯಕ್ರಮಕ್ಕೆ ಭದ್ರತೆ, ಸುರಕ್ಷತೆಯ 3 ಹಂತಗಳನ್ನು ಪಾಲನೆ ಮಾಡಬೇಕು
* ಸಂಬಂಧಪಟ್ಟ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ಬಿಸಿಸಿಐನಿಂದ ಲಿಖಿತ ಅನುಮತಿ ಪಡೆಯಬೇಕಾಗುತ್ತದೆ
* ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು












Click it and Unblock the Notifications