India vs Pakistan: ಪಾಕಿಸ್ತಾನಕ್ಕೆ ದೊಡ್ಡ ಆಘಾತ ಕೊಟ್ಟ ಬಿಸಿಸಿಐ
ಕಾಶ್ಮೀರ್ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಹೀನ ಕೃತ್ಯಕ್ಕೆ ಇದೀಗ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತಿದೆ. ಪೈಶಾಚಿಕ ಕೃತ್ಯಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಬೇಕು ಎನ್ನುವ ಕೂಗು ಶುರುವಾಗಿದೆ. ಕೇಂದ್ರ ಸರ್ಕಾರ ಕೂಡ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದು, ಭಾರತದಲ್ಲಿರುವ ಪಾಕಿಸ್ತಾನಿಯರಿಗೆ ಜಾಗ ಖಾಲಿ ಮಾಡುವಂತೆ ಸೂಚನೆ ಕೊಟ್ಟಿದೆ. ಭಯೋತ್ಪಾದಕ ದಾಳಿಯ ಕರಿನೆರಳು ಇದೀಗ ಎರಡೂ ದೇಶಗಳ ಕ್ರಿಕೆಟ್‌ನ ಮೇಲೂ ಬಿದ್ದಿದೆ.
ಪಾಕಿಸ್ತಾನದ ಕೃತ್ಯದಿಂದ ಸಿಟ್ಟಿಗೆದ್ದಿರುವ ಬಿಸಿಸಿಐ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುವ ಯೋಚನೆಯನ್ನು ಕೈಬಿಟ್ಟಿದೆ. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಆಡಿಸಲು ಯೋಚನೆ ಮಾಡಲಾಗುತ್ತಿತ್ತು, ಆದರೆ ಈಗ ಆಗಿರುವ ಘಟನೆಯಿಂದ ಇದು ಇನ್ನು ಸಾಕಷ್ಟು ವರ್ಷ ನಡೆಯುವುದು ಅನುಮಾನ ಎನ್ನುವಂತಾಗಿದೆ.

ಭಾರತ ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಆಡುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ. 2012-13ರಲ್ಲಿ ಪಾಕಿಸ್ತಾನ ಏಕದಿನ ಸರಣಿಗಾಗಿ ಭಾರತಕ್ಕೆ ಬಂದ ನಂತರ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಭಾರತ ಕೊನೆಯದಾಗಿ 2008 ರಲ್ಲಿ ಪಾಕಿಸ್ತಾನಕ್ಕೆ ಹೋಗಿತ್ತು.
2023 ರ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ಭಾರತಕ್ಕೆ ಬಂದಿತ್ತು. ಐಸಿಸಿ ಪಂದ್ಯಾವಳಿಗಳ ಸಮಯದಲ್ಲಿ ಮಾತ್ರ ಎರಡೂ ತಂಡಗಳು ಪಂದ್ಯಗಳನ್ನು ಆಡುತ್ತಿವೆ. ಭಾರತ 2025 ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತು ಮತ್ತು ಬಳಿಕ ಭಾರತದ ಪಂದ್ಯಗಳು ದುಬೈನಲ್ಲಿ ನಡೆದವು.
ಭಯೋತ್ಪಾದನೆ ದಾಳಿಗೆ ಖಂಡನೆ
ಈ ಹೀನ ಕೃತ್ಯವನ್ನು ನಾವು ಖಂಡಿಸುತ್ತೇವೆ. ನಮ್ಮ ಸರ್ಕಾರ ಏನೇ ಹೇಳಿದರೂ ನಾವು ಮಾಡುತ್ತೇವೆ. ಸರ್ಕಾರದ ನಿಲುವಿನಿಂದಾಗಿ ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ. ಮುಂದೆ ನಾವು ದ್ವಿಪಕ್ಷೀಯ ಪಂದ್ಯಗಳಲ್ಲಿ ಪಾಕಿಸ್ತಾನದೊಂದಿಗೆ ಆಡುವುದಿಲ್ಲ. ಆದರೆ ಐಸಿಸಿ ಕಾರ್ಯಕ್ರಮದ ವಿಷಯಕ್ಕೆ ಬಂದರೆ, ಐಸಿಸಿ ಭಾಗವಹಿಸುವಿಕೆಯಿಂದಾಗಿ ನಾವು ಆಡುತ್ತೇವೆ. ಐಸಿಸಿಗೆ ಏನು ನಡೆಯುತ್ತಿದೆ ಎಂಬುದರ ಅರಿವು ಕೂಡ ಇದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿರುವುದಾಗಿ ಸ್ಪೋರ್ಟ್ಸ್ ತಕ್‌ಗೆ ವರದಿ ಮಾಡಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೂಡ ದಾಳಿಯನ್ನು ಖಂಡಿಸಿತ್ತು, ಸಂತಾಪ ಸೂಚಿಸಿದ್ದಾರೆ. "ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರು ಜೀವ ಕಳೆದುಕೊಂಡಿರುವುದು ತೀವ್ರ ಆಘಾತ ತಂದಿದೆ. ಬಿಸಿಸಿಐ ಪರವಾಗಿ, ಈ ಭೀಕರ ಮತ್ತು ಹೇಡಿತನದ ಕೃತ್ಯವನ್ನು ಖಂಡಿಸುತ್ತಾ, ನಾನು ಮೃತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಅಗಲಿದ ಆತ್ಮಗಳಿಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯದಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗೌರವ ಸಲ್ಲಿಸಿದೆ. ಆಟ ಪ್ರಾರಂಭವಾಗುವ ಮೊದಲು 60 ಸೆಕೆಂಡುಗಳ ಮೌನ ಆಚರಿಸಲಾಯಿತು.ಟಾಸ್ ಸಮಯದಲ್ಲಿ, ಎರಡೂ ತಂಡಗಳ ನಾಯಕರು ತಮ್ಮ ಸಂತಾಪ ಸೂಚಿಸಿದರು ಮತ್ತು ಕೃತ್ಯವನ್ನು ಬಲವಾಗಿ ಖಂಡಿಸಿದರು.
ಪಂದ್ಯದ ಸಮಯದಲ್ಲಿ ಆಟಗಾರರು, ಪಂದ್ಯದ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಗೌರವದ ಸಂಕೇತವಾಗಿ ಕಪ್ಪು ತೋಳುಪಟ್ಟಿಗಳನ್ನು ಧರಿಸಿದ್ದರು. ಪಂದ್ಯದ ಸಂದರ್ಭದಲ್ಲಿ ಚಿಯರ್ ಲೀಡರ್ ನೃತ್ಯ ಪ್ರದರ್ಶನಗಳು, ಸಂಭ್ರಮಾಚರಣೆಯ ಪಟಾಕಿಗಳು, ಸಂಗೀತ ಅಥವಾ ಡಿಜೆ ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು.












Click it and Unblock the Notifications