ವಿಶ್ರಾಂತಿ ನೀಡುವ ನೆಪದಲ್ಲಿ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಟ್ಟ ಬಿಸಿಸಿಐ
ಮುಂಬೈ, ಜುಲೈ 14; ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡಲಾಗಿದೆ. ಅಲ್ಲದೆ ಜಸ್ಪ್ರೀತ್ ಬುಮ್ರಾಗೂ ವಿಶ್ರಾಂತಿ ನೀಡಲಾಗಿದೆ.
ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 5 ಪಂದ್ಯಗಳ ಟಿ20 ಸರಣಿಯು ಜುಲೈ 29 ರಂದು ಪ್ರಾರಂಭವಾಗಲಿದೆ, ಆದರೆ ಅದಕ್ಕೂ ಮೊದಲು ಜುಲೈ 22 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆಡಲಾಗುತ್ತದೆ.
ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ತಂಡಕ್ಕೆ ವಾಪಸಾಗಿದ್ದಾರೆ, ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್‌ಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಆದರೆ ಬಿಸಿಸಿಐ ಟ್ವೀಟ್‌ನಲ್ಲಿ ಅದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಫಾರ್ಮ್‌ಗೆ ಮರಳಲು ಕೊಹ್ಲಿಗಿಲ್ಲ ಅವಕಾಶ
ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ ಮತ್ತು ತೊಡೆಸಂದು ಸಮಸ್ಯೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಆಡಲಿಲ್ಲ, ಗಾಯದ ಸಮಸ್ಯೆಯಿಂದಾಗಿ 2ನೇ ಏಕದಿನ ಪಂದ್ಯದಲ್ಲೂ ಕೊಹ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ.
ಇನ್ನು ವೆಸ್ಟ್ ಇಂಡೀಸ್ ವಿರದ್ಧದ ಏಕದಿನ ಸರಣಿ, ಟಿ20 ಸರಣಿಯಲ್ಲೂ ಕೊಹ್ಲಿ ಆಡದಿರುವುದು ಅವರು ಫಾರ್ಮ್‌ಗೆ ಮರಳಲು ಅವಕಾಶ ಕಳೆದುಕೊಂಡಂತಾಗಿದೆ. ಟಿ20 ವಿಶ್ವಕಪ್ ಪಂದ್ಯಾವಳಿ ಸಮೀಪಿಸುತ್ತಿರುವ ಸಮಯದಲ್ಲಿ ಕೊಹ್ಲಿ ಆಯ್ಕೆ ಮೇಲೆ ಸಾಕಷ್ಟು ವಾದ-ವಿವಾದಗಳು ನಡೆಯುತ್ತಿವೆ. ಹಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಟೀಕಿಸಿದ್ದರೆ, ರೋಹಿತ್ ಶರ್ಮಾ ಸೇರಿದಂತೆ ಹಲವರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಟಿ20 ಸರಣಿಗೂ ಮುನ್ನ ಮೂರು ಏಕದಿನ ಪಂದ್ಯ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಹೆಸರಿಸಲಾಗಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆರಂಭಿಕ ಬ್ಯಾಟರ್ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ. ವೇಗದ ಬೌಲರ್ ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ, ವೇಗಿ ಅರ್ಶ್‌ದೀಪ್ ಸಿಂಗ್ ತಂಡದ ಭಾಗವಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ಗಾಗಿ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವಾಗ, ಯುವ ಆಟಗಾರರಾದ ದೀಪಕ್ ಹೂಡಾ, ಅವೇಶ್ ಖಾನ್ ಮತ್ತು ಅರ್ಶ್‌ದೀಪ್ ಸಿಂಗ್ ಅವರ ಪ್ರದರ್ಶನಗಳ ಮೇಲೆ ಗಮನ ಹರಿಸಲಾಗುತ್ತಿದೆ.

ರಾಹುಲ್, ಕುಲದೀಪ್ ಯಾದವ್‌ಗೆ ಫಿಟ್‌ನೆಸ್ ಪರೀಕ್ಷೆ
ಕೆ. ಎಲ್. ರಾಹುಲ್ ತಂಡಕ್ಕೆ ವಾಪಸಾಗಿದ್ದಾರೆ. ಆದರೆ ಅವರು ತಂಡದಲ್ಲಿ ಆಡಬೇಕಾದರೆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಿದೆ. ಕುಲದೀಪ್ ಯಾದವ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ, ಅವರೂ ಕೂಡ ಫಿಟ್‌ನೆಸ್ ಪರೀಕ್ಷೆ ಎದುರಿಸಲಿದ್ದಾರೆ.
ಭಾರತ ತನ್ನ ಅಗ್ರ ಕ್ರಮಾಂಕದ ಬ್ಯಾಟರ್ ಗಳ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಎದರುನೋಡುತ್ತಿರುವ ಕಾರಣ ಅನುಭವಿ ಕೆ. ಎಲ್. ರಾಹುಲ್ ಗಾಯದ ಸಮಸ್ಯೆಯಿಂದ ಮರಳುವುದು ನಿರ್ಣಾಯಕವಾಗಿದೆ. ಐಪಿಎಲ್ ನಂತರ ಗಾಯದ ಸಮಸ್ಯೆಯಿಂದ ಮರಳುತ್ತಿರುವ ರಾಹುಲ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಿ, ನಂತರ ಉತ್ತಮ ಆಟದ ಪ್ರದರ್ಶನ ನೀಡಲೇಬೇಕಾಗಿದೆ.

ವಿಂಡೀಸ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್. ಅಶ್ವಿನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಶದೀಪ್ ಸಿಂಗ್












Click it and Unblock the Notifications