ಏಷ್ಯನ್ ಗೇಮ್ಸ್ 2026: ಮಹಿಳೆಯರ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ 2 ಬೆಳ್ಳಿ ಪದಕ
Asian Games 2026: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟಿಂಗ್ ಪಟುಗಳು ಶುಭಾರಂಭ ಮಾಡಿದ್ದು, ಖ್ಯಾತ ಶೂಟರ್ ಎಲವೇನಿಲ್ ವಲರಿವನ್ ಅವರು ದೇಶಕ್ಕೆ ಮತ್ತೊಂದು ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದಾರೆ. ಭಾನುವಾರ (ಸೆಪ್ಟೆಂಬರ್ 20) ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು ರೋಚಕ ಹೋರಾಟ ನಡೆಸಿ ಈ ಸಾಧನೆ ಮಾಡಿದರು.
ವೈಯಕ್ತಿಕ ವಿಭಾಗದಲ್ಲಿ ಕಠಿಣ ಪೈಪೋಟಿ
ಫೈನಲ್ ಹಂತದ ಕೊನೆಯವರೆಗೂ ಚಾಂಪಿಯನ್ ಪಟ್ಟಕ್ಕಾಗಿ ಭಾರತೀಯ ಶೂಟರ್ ಎಲವೇನಿಲ್ ಹಾಗೂ ಜಪಾನ್‌ನ ಹಿನಾಟಾ ತೈಚಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 27 ವರ್ಷದ ಎಲವೇನಿಲ್ 252.4 ಅಂಕಗಳನ್ನು ಕಲೆಹಾಕಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಜಪಾನ್‌ನ ಹಿನಾಟಾ ತೈಚಿ ಒಟ್ಟು 253 ಅಂಕ ಗಳಿಸಿ ಹೊಸ 'ಏಷ್ಯನ್ ಗೇಮ್ಸ್ ದಾಖಲೆ'ಯೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಕೊನೆಯ ಹಂತದಲ್ಲಿ ಎಲವೇನಿಲ್ ಕೇವಲ 0.6 ಅಂಕಗಳ ಸೂಕ್ಷ್ಮ ಅಂತರದಿಂದ ಚಿನ್ನದ ಪದಕವನ್ನು ತಪ್ಪಿಸಿಕೊಂಡರು. ಇದೇ ಸ್ಪರ್ಧೆಯಲ್ಲಿ ಕೊರಿಯಾದ ಬಾನ್ ಹ್ಯೋಜಿನ್ (230.4 ಅಂಕ) ಕಂಚಿನ ಪದಕ ಪಡೆದರು.
8 ಮಂದಿ ಶೂಟರ್‌ಗಳಿದ್ದ ಫೈನಲ್ ಕಣದಲ್ಲಿದ್ದ ಭಾರತದ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ್ತಿ ಸೋನಮ್ ಮಾಸ್ಕರ್ 167 ಅಂಕ ಗಳಿಸಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅರ್ಹತಾ ಸುತ್ತಿನಲ್ಲಿ ಎಲವೇನಿಲ್ 633.5 ಅಂಕ ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ್ದರು.
ತಂಡ ವಿಭಾಗದಲ್ಲೂ ಬೆಳ್ಳಿ ಪದಕದ ಗರಿ
ಇದಕ್ಕೂ ಮೊದಲು ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲೂ ಭಾರತ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿತ್ತು. ಇದು ಪ್ರಸಕ್ತ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಎಲವೇನಿಲ್ ವಲರಿವನ್, ಸೋನಮ್ ಮಾಸ್ಕರ್ ಹಾಗೂ ವಿದರ್ಶಾ ಕೆ.ವಿನೋದ್ ಅವರನ್ನೊಳಗೊಂಡ ಭಾರತೀಯ ಮಹಿಳಾ ತ್ರಿವಳಿ ಬಳಗ ಒಟ್ಟು 1898.0 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆಯಿತು. ಈ ವಿಭಾಗದಲ್ಲಿ ಚೀನಾದ ಝಿಫೀ ವಾಂಗ್, ಜಿಯಾಯು ಹಾನ್ ಮತ್ತು ಯುಚೆನ್ ಡು ಅವರಿದ್ದ ತಂಡ 1904.2 ಅಂಕಗಳೊಂದಿಗೆ ನೂತನ ವಿಶ್ವ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಇನ್ನು ಜಪಾನ್ ತಂಡ (1897.1 ಅಂಕ) ಕಂಚಿನ ಪದಕಕ್ಕೆ ಭಾಜನವಾಯಿತು.
ಶೂಟಿಂಗ್‌ನಲ್ಲಿ ಭಾರತೀಯರು ಶುಭಾರಂಭ ಮಾಡಿದರೂ ಟೆಕ್‌ಬಾಲ್ ಅಖಾಡದಲ್ಲಿ ಭಾರತಕ್ಕೆ ತೀವ್ರ ನಿರಾಶೆ ಎದುರಾಯಿತು. ಮಹಿಳೆಯರ ಸಿಂಗಲ್ಸ್ ಹಾಗೂ ಮಿಶ್ರ ಡಬಲ್ಸ್ - ಎರಡೂ ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಸೆಮಿಫೈನಲ್ ಸೋತ ನಂತರ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲೂ ಸೋಲನುಭವಸಿದರು. ಅಂತಿಮವಾಗಿ ಎರಡೂ ಸ್ಪರ್ಧೆಗಳಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ವಿಶೇಷವಾಗಿ ಮಹಿಳೆಯರ ಸಿಂಗಲ್ಸ್‌ನ ಕಂಚಿನ ಪದಕದ ಸೆಣಸಾಟದಲ್ಲಿ ಭಾರತದ ಕ್ವಿಮ್ಸಿ ಜೋಕಿಮ್ ಡಿಸೋಜಾ ಅತ್ಯುತ್ತಮ ಹೋರಾಟ ತೋರಿದರಾದರೂ, ಜಪಾನ್‌ನ ವಿಶ್ವ 7ನೇ ಶ್ರೇಯಾಂಕಿತ ಆಟಗಾರ್ತಿ ಯುಯಿನಾ ಸಕಮೊಟೊ ವಿರುದ್ಧ 12-11, 12-11 ಸೆಟ್‌ಗಳ ನೇರ ಅಂತರದಲ್ಲಿ ಸೋಲನುಭವಿಸಿದರು. ಅತ್ಯಂತ ಕಡಿಮೆ ಅಂತರದ ಈ ಸೋಲಿನಿಂದಾಗಿ ಭಾರತದ ಖಾತೆಗೆ ಸೇರಬೇಕಿದ್ದ ಮತ್ತೊಂದು ಪದಕ ಕೈತಪ್ಪಿಹೋಯಿತು.


Click it and Unblock the Notifications
