ಏಷ್ಯಾ ಕಪ್: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್
ಮುಂಬೈ, ಆಗಸ್ಟ್ 24: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ತಂಡದ ಕೋಚ್ ಆಗಿ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಕ ಮಾಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೇಮಿಸಿದೆ.
ಜಿಂಬಾಬ್ವೆಯಲ್ಲಿ ನಡೆದ ಭಾರತದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾರ್ಯ ನಿರ್ವಹಿಸಿದ್ದರು. ಈಗ ಹರಾರೆಯಿಂದ ದುಬೈಗೆ ತೆರಳಲಿದ್ದು ಟೀಂ ಇಂಡಿಯಾ ಸೇರಲಿದ್ದಾರೆ.
ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್‌ಗೆ 47 ವರ್ಷದ ಭಾರತೀಯ ತಂಡದ ತಾತ್ಕಾಲಿಕ ಕೋಚ್ ಆಗಲಿದ್ದಾರೆ ಎಂದು ವರದಿ ಬಂದಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೋವಿಡ್ ಪಾಸಿಟಿವ್ ಎಂದು ವರದಿ ಬಂದ ನಂತರ ಯುಎಇಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ.
"ದ್ರಾವಿಡ್ ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಕೋವಿಡ್ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಅವರು ಕೋವಿಡ್ ನೆಗಟಿವ್ ವರದಿಯೊಂದಿಗೆ ಹಿಂತಿರುಗಿದ ನಂತರ ಅವರು ತಂಡವನ್ನು ಸೇರಿಕೊಳ್ಳುತ್ತಾರೆ" ಎಂದು ಮಂಡಳಿಯು ಮಂಗಳವಾರ ಅಧಿಕೃತ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ದ್ರಾವಿಡ್ ಅವರ ಆರೋಗ್ಯ ಸ್ಥಿತಿಯನ್ನು ಇನ್ನೂ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ ಮತ್ತು ದ್ರಾವಿಡ್ ಅವರು ಕರ್ತವ್ಯವನ್ನು ಪುನರಾರಂಭಿಸುವವರೆಗೆ ಲಕ್ಷ್ಮಣ್ ಅವರು ತಂಡದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಭಾರತವು ಭಾನುವಾರದಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಅಭಿಯಾನವನ್ನು ಆರಂಭಿಸಲಿದೆ.
ಭಾರತದ ಪ್ರಮುಖ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯದ ಸಮಸ್ಯೆಯಿಂದ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಭಾರತದ ಬೌಲಿಂಗ್ ವಿಭಾಗದ ಬಗ್ಗೆ ಚಿಂತೆ ಇರುವಾಗಲೇ ಈಗ ರಾಹುಲ್ ದ್ರಾವಿಡ್ ಅವರ ಅನುಭವ, ಮಾರ್ಗದರ್ಶನವನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. ದ್ರಾವಿಡ್ ಅನುಪಸ್ಥಿತಿ ಖಂಡಿತವಾಗಿಯೂ ಏಷ್ಯಾಕಪ್‌ನಲ್ಲಿ ಭಾರತವನ್ನು ಕಾಡಲಿದೆ
ಐಪಿಎಲ್ ನಂತರ ಗಾಯದ ಸಮಯದಿಂದ ಕ್ರಿಕೆಟ್‌ನಿಂದ ದೂರವುಳಿದಿದ್ದ ಕೆ.ಎಲ್. ರಾಹುಲ್ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ, ಕೊರೊನಾ ಸೋಂಕಿಗೆ ತುತ್ತಾದ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್‌ರನ್ನು ನಾಯಕರನ್ನಾಗಿ ನೇಮಿಸಲಾಯಿತು.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಜಿಂಬಾಬ್ವೆ ವಿರುದ್ಧ ಸರಣಿಗೆ ನಾಯಕನಾಗಿ ಮರಳಿದ ಕೆ.ಎಲ್.ರಾಹುಲ್ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ರನ್ ಬರ ನೀಗಿಸಿ ಮಾಜಿ ನಾಯಕ ಕೊಹ್ಲಿ ಕೂಡಾ ಅಬ್ಬರಿಸಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಏಷ್ಯಾಕಪ್‌ನ ಭಾರತ ಪಾಕಿಸ್ತಾನ ನಡುವಣ ಪಂದ್ಯ ಸದ್ಯ ಭಾರಿ ಸದ್ದು ಮಾಡುತ್ತಿದೆ. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಬಾರಿ ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ಈಗ ಮತ್ತೆ ಅದೇ ಸ್ಟೇಡಿಯಂನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿಯೊಂದಿಗೆ ಮುಖಾಮುಖಿಯಾಗುತ್ತಿದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ತಂಡ ಹೇಗಿದೆ: ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್ ಹಾಗೂ ದೀಪಕ್ ಚಾಹರ್ ಸ್ಟಾಂಡ್ ಬೈಆಗಿ ಅಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಅರ್ಷ್ ದೀಪ್ ಸಿಂಗ್ ತಂಡದಲ್ಲಿ ಉಳಿದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ T20I ಸರಣಿಯಲ್ಲಿ ವಿಶ್ರಾಂತಿ ಪಡೆದ ನಂತರ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ತಂಡಕ್ಕೆ ಮರಳಿದ್ದಾರೆ, ಆದರೆ ಸಾಮಾನ್ಯ ಆಟಗಾರರಾದ ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಎಲ್ಲರೂ 15 ಸದಸ್ಯರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಅರ್ಹತಾ ಸುತ್ತಿನಿಂದ ಆಯ್ಕೆಯಾದ ತಂಡ ಇದ್ದರೆ, ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡ ಗಳಿವೆ. ಪ್ರತಿ ತಂಡಗಳು ಗುಂಪಿನ ಇತರೆ ತಂಡಗಳ ಜೊತೆ ಸೆಣೆಸಲಿವೆ, ಪ್ರತಿ ಗುಂಪಿನ ಟಾಪ್ 2 ತಂಡಗಳು ಸೂಪರ್ 4 ಹಂತಕ್ಕೇರಲಿವೆ. ಈ ಹಂತದ ಟಾಪ್ 2 ತಂಡಗಳು ಫೈನಲ್ ಹಂತಕ್ಕೇರಲಿವೆ.












Click it and Unblock the Notifications