Asia Cup 2022: ಪಂದ್ಯಗಳು, ಸ್ಥಳ, ಟಿಕೆಟ್ ದರ, ನೇರಪ್ರಸಾರ ವಿವರಗಳನ್ನು ತಿಳಿಯಿರಿ
ಏಷ್ಯಾ ಕಪ್ 2022 ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 27 ರಿಂದ ಪ್ರತಿಷ್ಠಿತ ಕಪ್‌ಗಾಗಿ ಕದನ ಶುರುವಾಗಲಿದೆ. ಆಗಸ್ಟ್ 28ರಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಸೆಪ್ಟಂಬರ್ 13ರಂದು ಫೈನಲ್ ಪಂದ್ಯ ನಡೆಯಲಿದೆ.
ಏಷ್ಯಾ ಕಪ್ 2022 ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗವಹಿಸಲಿವೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಟೂರ್ನಿಗೆ ನೇರವಾಗಿ ಅರ್ಹತೆ ಪಡೆದಿದ್ದರೆ. ಟೂರ್ನಿಯಲ್ಲಿ ಭಾಗವಹಿಸಲು ಇನ್ನೊಂದು ತಂಡಕ್ಕೆ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಬೇಕಾಗುತ್ತದೆ.
ಹಾಂಗ್ ಕಾಂಗ್, ಕುವೈತ್, ಸಿಂಗಾಪುರ್ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಲಿದ್ದು. ಅಲ್ಲಿ ಗೆಲುವು ಸಾಧಿಸಿದ ಒಂದು ತಂಡ ಏಷ್ಯಾ ಕಪ್‌ಗೆ ಅರ್ಹತೆ ಪಡೆಯಲಿದೆ.
ಏಷ್ಯಾ ಕಪ್ 2022 ಯುಎಇಯಲ್ಲಿ ಶ್ರೀಲಂಕಾ ಆತಿಥ್ಯ ವಹಿಸಲಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಶ್ರೀಲಂಕಾದಿಂದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. 2018 ರಲ್ಲಿ ಬಾಂಗ್ಲಾದೇಶವನ್ನು ಫೈನಲ್‌ನಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದಿದ್ದ ಭಾರತವು ಟೂರ್ನಿಯ ಹಾಲಿ ಚಾಂಪಿಯನ್ ಆಗಿದೆ. ಭಾರತ ಇದುವರೆಗೆ 7 ಏಷ್ಯಾಕಪ್ ಪ್ರಶಸ್ತಿಗಳನ್ನು ಗೆದ್ದಿದೆ. ಶ್ರೀಲಂಕಾ 5 ಪ್ರಶಸ್ತಿಗಳೊಂದಿಗೆ ನಂತರದ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 2 ಪ್ರಶಸ್ತಿಗಳನ್ನು ಗೆದ್ದಿದೆ.

ಏಷ್ಯಾಕಪ್‌ನಲ್ಲಿ ನಡೆಯಲಿವೆ ಒಟ್ಟು 13 ಪಂದ್ಯಗಳು
ಏಷ್ಯಾ ಕಪ್ 2022 ರಲ್ಲಿ ಎರಡು ಗುಂಪುಗಳಿವೆ. ಗುಂಪು 1 ರಲ್ಲಿ ಭಾರತ, ಪಾಕಿಸ್ತಾನ ಮತ್ತು ಅರ್ಹತಾ ತಂಡವಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವಿದೆ. ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿವೆ.
ಗುಂಪು ಹಂತದಲ್ಲಿ, ಪ್ರತಿ ತಂಡವು ತಮ್ಮ ಗುಂಪಿನಲ್ಲಿರುವ ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ. ಎರಡೂ ಗುಂಪಿನ ಅಗ್ರ 2 ತಂಡಗಳು ಸೂಪರ್ ಫೋರ್ ಸುತ್ತಿಗೆ ಅರ್ಹತೆ ಪಡೆಯಲಿವೆ. ಸೂಪರ್ 4 ಸುತ್ತಿನಲ್ಲಿ, ಪ್ರತಿ ತಂಡವು ಪರಸ್ಪರ ಒಂದು ಪಂದ್ಯವನ್ನು ಆಡುತ್ತದೆ. ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಸಜ್ಜಾಗಿದೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ
ಏಷ್ಯಾ ಕಪ್ 2022 ಪಂದ್ಯಗಳಿಗೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸುಮಾರು 350 ಫ್ಲಡ್‌ಲೈಟ್‌ಗಳು ಮತ್ತು ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಿದೆ. ಆಟಗಾರರು, ವಿಐಪಿಗಳು, ಅಭಿಮಾನಿಗಳು ಮತ್ತು ಅಧಿಕಾರಿಗಳಿಗೆ ವಿಶೇಷವಾದ ಅತ್ಯಾಧುನಿಕ ಸ್ಟ್ಯಾಂಡ್‌ಗಳು ಮತ್ತು ಗ್ಯಾಲರಿಗಳಿವೆ.
ಪಂದ್ಯಾವಳಿಯ 13 ಪಂದ್ಯಗಳಲ್ಲಿ 10 ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ನಡೆಯಲಿವೆ. ಉಳಿದ ಮೂರು ಪಂದ್ಯಗಳು ಮಾತ್ರ ಶಾರ್ಜಾದಲ್ಲಿ ನಡೆಯಲಿದೆ

ಏಷ್ಯಾಕಪ್ ಪಂದ್ಯಗಳ ವೀಕ್ಷಣೆಗೆ ಟಿಕೆಟ್ ದರ
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಷ್ಯಾ ಕಪ್ ಟಿಕೆಟ್ ದರವು 30 ದಿರ್ಹಾಂ (650 ರುಪಾಯಿ) ಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಪಂದ್ಯದ ಆಧಾರದ ಮೇಲೆ 500 ದಿರ್ಹಾಂ (10,800 ರುಪಾಯಿ) ವರೆಗೆ ಹೆಚ್ಚಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ದರವು ಸಾಮಾನ್ಯ ಪಂದ್ಯಗಳ ಟಿಕೆಟ್ ದರಕ್ಕಿಂತ ದುಪ್ಪಟ್ಟಾಗಿರುತ್ತದೆ.
ಎರಡೂ ದೇಶಗಳ ಕ್ರೀಡಾಭಿಮಾನಿಗಳು ಟಿಕೆಟ್‌ಗಾಗಿ ಮುಗಿ ಬೀಳಲಿದ್ದು, ಕ್ರೀಡಾಂಗಣದಲ್ಲಿ ಕಿಕ್ಕಿರುದು ಪ್ರೇಕ್ಷಕರು ಸೇರಲಿದ್ದಾರೆ. ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಏಷ್ಯಾಕಪ್‌ನ ಎಲ್ಲಾ ಪಂದ್ಯಗಳು ನೇರಪ್ರಸಾರವಾಗಲಿದೆ.

ಏಷ್ಯಾಕಪ್‌ಗೆ ಭಾರತ, ಪಾಕಿಸ್ತಾನ ತಂಡ ಪ್ರಕಟ
ಏಷ್ಯಾ ಕಪ್ 2022 ಕ್ಕೆ ಭಾರತ ಮತ್ತು ಪಾಕಿಸ್ತಾನ ಮಾತ್ರ ತಮ್ಮ ತಂಡವನ್ನು ಪ್ರಕಟಿಸಿವೆ. ಭಾರತವು ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಿಸಿದೆ ಮತ್ತು ಪಾಕಿಸ್ತಾನವು ಬಾಬರ್ ಅಜಮ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್. (ಸ್ಟ್ಯಾಂಡ್‌ಬೈ: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.)
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಖಾದಿರ್.












Click it and Unblock the Notifications