Ashish Nehra: ಬಿಸಿಸಿಐ ಆಫರ್ ತಿರಸ್ಕರಿಸಿದ ಆಶಿಶ್ ನೆಹ್ರಾ!
ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದ ಟಿ 20 ಕೋಚ್ ಪಾತ್ರಕ್ಕಾಗಿ ಸಂಪರ್ಕಿಸಿದೆ ಎಂದು ವರದಿಯಾಗಿದೆ. ಐಸಿಸಿ ವಿಶ್ವಕಪ್ 2023 ರ ನಂತರ ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಸ್ವರೂಪಗಳಿಗೆ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಆಶಿಶ್ ನೆಹ್ರಾ ಬಿಸಿಸಿಐ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. 2024ರಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಆಶಿಶ್ ನೆಹ್ರಾ ಅವರನ್ನು ಸಂಪರ್ಕಿಸಲಾಗಿದೆ.
ಭಾರತ ತಂಡದ ಒಂದು ದಶಕದ ಪ್ರಶಸ್ತಿ ಬರ ಮುಂದುವರೆದಿದೆ, ಈ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್ ತಲುಪಿದರು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಈಗ ಭಾರತ ಮುಂದಿನ ಟಿ20 ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಐಪಿಎಲ್‌ನಲ್ಲಿ ಆಶಿಶ್ ನೆಹ್ರಾ ಮಿಂಚು!
ಆಶಿಶ್ ನೆಹ್ರಾ ಐಪಿಎಲ್‌ನಲ್ಲಿ ಯಶಸ್ವಿ ಕೋಚ್ ಆಗಿದ್ದಾರೆ. ಅವರ ಕೋಚಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ಮೊದಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದರೆ, ಎರಡನೇ ಆವೃತ್ತಿಯಲ್ಲಿ ಫೈನಲ್ ತಲುಪಿತ್ತು. ಟಿ20 ಮಾದರಿಯಲ್ಲಿ ಆಶಿಶ್ ನೆಹ್ರಾ ಉತ್ತಮ ಕೋಚ್ ಆಗುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದಲೇ ಬಿಸಿಸಿಐ ಅವರನ್ನು ಸಂಪರ್ಕಿಸಿದೆ.
ರಾಹುಲ್ ದ್ರಾವಿಡ್ ಅವಧಿ ವಿಸ್ತರಣೆ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ರಾಹುಲ್ ದ್ರಾವಿಡ್ ಅವರು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ವರೆಗೆ ತಮ್ಮ ಕೋಚ್ ಅವಧಿಯನ್ನು ವಿಸ್ತರಿಸಬೇಕು ಎಂದಿದ್ದಾರೆ.
ಇತ್ತೀಚಿನ ವರದಿ ಪ್ರಕಾರ ಇದಕ್ಕೆ ರಾಹುಲ್ ದ್ರಾವಿಡ್ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ತರಬೇತಿ ಸಿಬ್ಬಂದಿಯ ಅವಧಿ ಕೂಡ ವಿಸ್ತರಣೆಯಾಗಲಿದೆ.
ಸದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದಾರೆ. ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಭಾರತದ ಯುವಪಡೆ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಎರಡು ಪಂದ್ಯಗಳಲ್ಲಿ ಗೆದ್ದಿದ್ದು, ಒಂದು ಪಂದ್ಯದಲ್ಲಿ ಭಾರತ ಸೋತಿದೆ. ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರೂ ಭಾರತ ಸರಣಿ ವಶಪಡಿಸಿಕೊಳ್ಳಲಿದೆ.












Click it and Unblock the Notifications