151, 173.. ಗುಜರಾತ್ ವಿರುದ್ಧ ಕರ್ನಾಟಕ ಗೆಲ್ಲಿಸಿದ ರಾಹುಲ್ ದ್ರಾವಿಡ್ ಪುತ್ರ.. ಸೆಹ್ವಾಗ್ ಮಗ ಭರ್ಜರಿ ಶತಕದ ಸಾಧನೆ
Anvay Dravid: ವಿನೂ ಮಂಕಡ್ ಟ್ರೋಫಿ ಪಂದ್ಯದಲ್ಲಿ ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗರಾದ ಕನ್ನಡಿಗ ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಪುತ್ರರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸದ್ದು ಮಾಡಿದ್ದಾರೆ. ವಿಶೇಷತೆ ಅಂದ್ರೆ ದ್ರಾವಿಡ್ ಮಗ ಅನ್ವಯ್ ಕರ್ನಾಟಕ ತಂಡವನ್ನು ಗೆಲಿಸಿದ್ದು ಗಮನ ಸೆಳೆದಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಗಳಿಸಿದ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ತಂಡವು ಗುಜರಾತ್ ನೀಡಿದ್ದ 358 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಮತ್ತೊಂದೆಡೆ ವಿರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಡೆಲ್ಲಿ ಪರ ಶತಕ ಸಿಡಿಸಿದರೂ, ಅವರ ತಂಡ ಸೋಲನ್ನನುಭವಿಸಿದೆ.

ಕರ್ನಾಟಕಕ್ಕೆ ಗೆಲುವು ತಂದುಕೊಟ್ಟ ಅನ್ವಯ್ ದ್ರಾವಿಡ್
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಕರ್ನಾಟಕ ಅಂಡರ್-19 ತಂಡದ ನಾಯಕತ್ವ ವಹಿಸಿರುವ 17 ವರ್ಷದ ಅನ್ವಯ್ ದ್ರಾವಿಡ್, ಗುಜರಾತ್ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಕೇವಲ 100 ಎಸೆತಗಳಲ್ಲಿ 151 ರನ್ ಬಾರಿಸಿದ ಅನ್ವಯ್, ತಂಡಕ್ಕೆ ಬೆನ್ನಟ್ಟುವಿಕೆಯಲ್ಲಿ ಆಸರೆಯಾದರು.
357 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ ಗುಜರಾತ್
ಮೊದಲು ಬ್ಯಾಟ್ ಬೀಸಿದ ಗುಜರಾತ್, ಸಮೀರ್ ಭಂಡಾರಿ ಮತ್ತು ಯಶ್ ಪಂಜಾವಾನಿ ಅವರ ನಡುವಿನ 217 ರನ್‌ಗಳ ಭರ್ಜರಿ ಜೊತೆಯಾಟದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 357 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಬಳಿಕ ಬ್ಯಾಟ್ ಬೀಸಿದ ಕರ್ನಾಟಕವು ಅನ್ವಯ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಈ ಬೃಹತ್ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.
5 ವಿಕೆಟ್‌ಗಳಿಂದ ಜಯ ಸಾಧಿಸಿದ ಕರ್ನಾಟಕ
358 ರನ್‌ಗಳ ಬೃಹತ್ ಮೊತ್ತದ ಸವಾಲನ್ನು ಬೆನ್ನಟ್ಟಿದ ಕರ್ನಾಟಕ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಆದರೆ, ಧ್ರುವ್ ಕೃಷ್ಣನ್ ಹಾಗೂ ಅನ್ವಯ್ ದ್ರಾವಿಡ್ ಮೂರನೇ ವಿಕೆಟ್‌ಗೆ ಬರೋಬ್ಬರಿ 204 ರನ್‌ಗಳ ಪ್ರಮುಖ ಜೊತೆಯಾಟವಾಡಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅನ್ವಯ್ ವಿಕೆಟ್ ಒಪ್ಪಿಸಿದ ನಂತರ, ಅನಿಕೇತ್ ರೆಡ್ಡಿ ಮತ್ತು ತೇಜಸ್ ರೆಡ್ಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕರ್ನಾಟಕವು 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಚಂಡೀಗಢದ ವಿರುದ್ಧ ಆರ್ಯವೀರ್ ಸೆಹ್ವಾಗ್ ಶತಕ ವ್ಯರ್ಥ
ಮತ್ತೊಂದೆಡೆ ಡೆಲ್ಲಿ ತಂಡದ ನಾಯಕರಾಗಿರುವ ವಿರೇಂದ್ರ ಸೆಹ್ವಾಗ್ ಪುತ್ರ, 18 ವರ್ಷದ ಆರ್ಯವೀರ್ ಸೆಹ್ವಾಗ್ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಕೇವಲ 143 ಎಸೆತಗಳಲ್ಲಿ 173 ರನ್ ಗಳಿಸಿ ಮಿಂಚಿದ್ದರು. ಆರ್ಯವೀರ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡವು 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 289 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.
ಆದರೆ ಈ ಗುರಿಯನ್ನು ಚಂಡೀಗಢ ತಂಡವು ಸುಲಭವಾಗಿ ತಲುಪಿತು. ಚಂಡೀಗಢದ ರೂಪೇಶ್ ಯಾದವ್ 125 ಎಸೆತಗಳಲ್ಲಿ 167 ರನ್ (5 ಸಿಕ್ಸರ್, 23 ಬೌಂಡರಿ) ಸಿಡಿಸಿ, 42ನೇ ಓವರ್‌ನಲ್ಲೇ ತಂಡವನ್ನು 5 ವಿಕೆಟ್‌ಗಳಿಂದ ಗೆಲುವಿನತ್ತ ಮುನ್ನಡೆಸಿದರು. ಇದರಿಂದಾಗಿ ಆರ್ಯವೀರ್ ಅವರ ಭರ್ಜರಿ ಶತಕದ ಹೋರಾಟ ವ್ಯರ್ಥವಾಯಿತು.
ಒಟ್ಟಿನಲ್ಲಿ ಇಬ್ಬರೂ ದಿಗ್ಗಜರ ಮಕ್ಕಳು ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ನಾಯಕರಾಗಿ ಹಾಗೂ ಬ್ಯಾಟರ್‌ಗಳಾಗಿ ತಮ್ಮ ಛಾಪನ್ನು ಮೂಡಿಸುತ್ತಿದ್ದು, ಅನ್ವಯ್ ದ್ರಾವಿಡ್ ಅವರ ಶತಕ ಕರ್ನಾಟಕಕ್ಕೆ ಭರ್ಜರಿ ಗೆಲುವನ್ನು ತಂದುಕೊಟ್ಟಿದೆ. ಇವರಿಗೆ ಇದೀಗ ಕನ್ನಡಿಗರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.


Click it and Unblock the Notifications
