RCB: ಸಿಎಸ್‌ಕೆ ಪರ ಆಡುವ ಆಸೆ ವ್ಯಕ್ತಪಡಿಸಿದ ಆರ್‌ಸಿಬಿ ಆಟಗಾರ
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ ಮುನ್ನ ಮೆಗಾ ಹರಾಜು ನಡೆಯಲಿದೆ. ಹಲವು ತಂಡಗಳು ಪ್ರಮುಖ ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಲಿದ್ದು, ಅನೇಕ ಆಟಗಾರರು ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸಲಿದ್ದಾರೆ. ಪ್ರಮುಖ ಆಟಗಾರರು ಕೂಡ ಫ್ರಾಂಚೈಸಿಗಳನ್ನು ಬದಲಾಯಿಸುವ ಸಾಧ್ಯತೆ ಇದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನ ಪ್ರಮುಖ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಅನುಜ್ ರಾವತ್ ಇದೀಗ ಸಿಎಸ್‌ಕೆ ಪರವಾಗಿ ಆಡಬೇಕು ಎಂದು ಹೇಳಿದ್ದಾರೆ. 2024ರ ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 48 ರನ್ ಗಳಿಸಿ ಗಮನ ಸೆಳೆದಿದ್ದರು. ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು.

ಮೆಗಾ ಹರಾಜಿಗೆ ಮುನ್ನ ಆರ್‌ಸಿಬಿ ಅನುಜ್ ರಾವತ್‌ರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಮೆಗಾ ಹರಾಜಿನಲ್ಲಿ ಮತ್ತೆ ಅನುಜ್ ರಾವತ್‌ಗೆ ಬಿಡ್ ಮಾಡುವುದು ಕೂಡ ಅನುಮಾನವಾಗಿದೆ. ಬೇರೆ ಆಯ್ಕೆಗಳನ್ನು ಫ್ರಾಂಚೈಸಿ ಹುಡುಕುವ ಸಾಧ್ಯತೆ ಇದೆ.
ಧೋನಿಗಾಗಿ ಆಡಬೇಕು ಎಂದ ಅನುಜ್
ಕ್ರಿಕೆಟ್ ನೆಕ್ಸ್ಟ್‌ಗೆ ನೀಡಿರುವ ಸಂದರ್ಶನದಲ್ಲಿ ಅನುಜ್ ರಾವತ್, "ಒಮ್ಮೆ ಆರ್‌ಸಿಬಿ ತಂಡಕ್ಕಾಗಿ ಆಡಿದರೆ ಶಾಶ್ವತವಾಗಿ ಅದೇ ತಂಡಕ್ಕೆ ಆಡಬೇಕು ಎನ್ನುವ ಆಸೆ ಎಲ್ಲಾ ಆಟಗಾರರಿಗೂ ಇರುತ್ತದೆ. ನನಗೂ ಆರ್ ಸಿಬಿ ತಂಡದಲ್ಲೇ ಉಳಿಯುವ ಆಸೆ ಇದೆ, ಒಂದು ವೇಳೆ ಆರ್‌ಸಿಬಿ ತಂಡದಲ್ಲಿ ಅವಕಾಶ ಸಿಗದೇ ಇದ್ದರೆ, ಸಿಎಸ್‌ಕೆ ತಂಡಕ್ಕಾಗಿ ಆಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
ಎಂಎಸ್ ಧೋನಿ ಇದ್ದಾರೆ ಎನ್ನುವ ಕಾರಣಕ್ಕೆ ನಾನು ಸಿಎಸ್‌ಕೆ ತಂಡಕ್ಕಾಗಿ ಆಡಲು ಬಯಸುತ್ತೇನೆ. ಅವರ ವ್ಯಕ್ತಿತ್ವ ವಿಭಿನ್ನವಾಗಿದೆ. ಎಲ್ಲಾ ಆಟಗಾರರು ಅವರ ಬಗ್ಗೆ ಮಾತನಾಡುತ್ತಾರೆ ಎಂದು ಧೋನಿ ಮೇಲಿನ ತಮ್ಮ ಅಭಿಮಾನವನ್ನು ಬಹಿರಂಗಪಡಿಸಿದ್ದಾರೆ.
ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅನುಜ್ ರಾವತ್ ಐಪಿಎಲ್‌ನಲ್ಲಿ ಆರ್ ಸಿಬಿ ತಂಡದಲ್ಲಿ ಉಳಿಯುವ ಭರವಸೆಯನ್ನು ಹೊಂದಿದ್ದಾರೆ. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ 10 ಇನ್ನಿಂಗ್ಸ್‌ಗಳಲ್ಲಿ 156.83 ಸ್ಟ್ರೈಕ್‌ರೇಟ್‌ನಲ್ಲಿ 356 ರನ್ ಗಳಿಸಿದ್ದರು.
ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಪುರಾನಿ ಡಿಲ್ಲಿ-6 ವಿರುದ್ಧ ಕೇವಲ 66 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಉದಯೋನ್ಮುಖ ಎಡಗೈ ಬ್ಯಾಟರ್ ಅನುಜ್ ರಾವತ್ ಐಪಿಎಲ್‌ನಲ್ಲಿ ಈವರೆಗೆ 24 ಪಂದ್ಯಗಳನ್ನು ಆಡಿದ್ದಾರೆ. 119.10 ರ ಸಾಧಾರಣ ಸ್ಟ್ರೈಕ್ ರೇಟ್‌ನಲ್ಲಿ 318 ರನ್‌ಗಳನ್ನು ಸಿಡಿಸಿದ್ದಾರೆ. ಉತ್ತಮ ಫೀಲ್ಡರ್ ಕೂಡ ಆಗಿರುವ ಅನುಜ್ ರಾವತ್, ಐಪಿಎಲ್ ಮೆಗಾ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.












Click it and Unblock the Notifications