Eng vs Afg: ಇಂಗ್ಲೆಂಡ್‌ಗೆ ಬಿಗ್ ಶಾಕ್ ಕೊಟ್ಟ ಅಫ್ಘಾನಿಸ್ತಾನ; ಆಂಗ್ಲರ ಚಾಂಪಿಯನ್ಸ್ ಟ್ರೋಫಿ ಸೆಮಿಸ್ ಕನಸು ಭಗ್ನ
ಪಾಕಿಸ್ತಾನದ ಲಾಹೋರ್ ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಶಾಕ್ ನೀಡಿದೆ. ರೋಚಕ ಪಂದ್ಯದಲ್ಲಿ 8 ರನ್‌ಗಳಿಂದ ಗೆಲುವು ಸಾಧಿಸಿದ ಆಫ್ಘನ್ನರು ಆಂಗ್ಲರನ್ನು ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ರೇಸ್‌ನಿಂದಲೇ ಹೊರದಬ್ಬಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿದ್ದ ಅಫ್ಘಾನಿಸ್ತಾನ ಮತ್ತೊಂದು ಐಸಿಸಿ ಪಂದ್ಯಾವಳಿಯಲ್ಲೂ ಇಂಗ್ಲೆಂಡ್‌ನ ಕನಸನ್ನು ಭಗ್ನಗೊಳಿಸಿದೆ.
ಇಬ್ರಾಹಿಂ ಝದ್ರಾನ್ ಅಮೋಘ ಶತಕ ಸಿಡಿಸುವ ಮೂಲಕ ದಾಖಲೆ ಮಾಡಿದರೆ. ಅಜ್ಮತುಲ್ಲಾಹ್ ಒಮರ್ ಜಾಯ್ 5 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಸೋಲಿಗೆ ಪ್ರಮುಖ ಕಾರಣವಾದರು. ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳನ್ನು ಸೋತಿದ್ದ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಸೋಲಿನ ಸರಣಿ ಮುಂದುವರೆಸಿದೆ. ಸತತವಾಗಿ ಆರು ಪಂದ್ಯಗಳಲ್ಲಿ ಸೋಲುವ ಮೂಲಕ 2009ರ ಬಳಿಕ ಕೆಟ್ಟ ದಾಖಲೆ ಮಾಡಿದೆ.

ಇಬ್ರಾಹಿಮ್ ಝದ್ರಾನ್ ದಾಖಲೆಯ ಶತಕ
ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 37 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಇಬ್ರಾಹಿಂ ಝದ್ರಾನ್ 146 ಎಸೆತಗಳಲ್ಲಿ 12 ಬೌಂಡರಿ 6 ಸಿಕ್ಸರ್ ಸಹಿತ 177 ರನ್ ಗಳಿಸುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಇದು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬ್ಯಾಟರ್ ಒಬ್ಬ ಗಳಿಸಿದ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಆಗಿದೆ.
ನಾಯಕ ಹಷ್ಮತ್‌ಉಲ್ಲಾ ಶಾಹಿದಿ 40 ರನ್ ಗಳಿಸುವ ಮೂಲಕ ಝದ್ರಾನ್‌ಗೆ ಬೆಂಬಲ ಕೊಟ್ಟರು. ಶಾಹಿದಿ ಔಟಾದ ಬಳಿಕ ಬಂದ ಅನುಭವಿ ಬ್ಯಾಟರ್ ಮೊಹಮ್ಮದ್ ನಬಿ 111 ರನ್‌ಗಲ ಜೊತೆಯಾಟ ಆಡಿದರು. 24 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಹಿತ 40 ರನ್ ಗಳಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 325 ರನ್ ಗಳಿಸಿತು.
ಜೋ ರೂಟ್ ಶತಕ ವ್ಯರ್ಥ
ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಫಿಲ್ ಸಾಲ್ಟ 12 ರನ್ ಗಳಿಸಿ ಔಟಾಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಜೇಮ್ ಸ್ಮಿತ್ 9 ರನ್ ಗಳಿಸಿ ಔಟಾದರು. ಬೆನ್ ಡಕೆಟ್ ಮತ್ತು ಜೋ ರೂಟ್ ಜೋಡಿ 68 ರನ್ ಕಲೆಹಾಕುವ ಮೂಲಕ ನೆರವಾದರು.
ಡಕೆಟ್ 38 ರನ್ ಗಳಿಸಿ ಔಟಾದರು. ಹ್ಯಾರಿ ಬ್ರೂಕ್ 25 ರನ್ ಗಳಿಸಿದರೆ, ಬಳಿಕ ಬಂದ ನಾಯಕ ಜೋಸ್ ಬಟ್ಲರ್ 38 ರನ್ ಗಳಿಸುವ ಮೂಲಕ ರೂಟ್‌ಗೆ ಬೆಂಬಲ ಕೊಟ್ಟರು. ಜೋ ರೂಟ್ ಮಾತ್ರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 111 ಎಸೆತಗಳಲ್ಲಿ 11 ಬೌಂಡರಿ 1 ಸಿಕ್ಸರ್ ಸಹಿತ 120 ರನ್ ಗಳಿಸಿದರು. ಜೇಮಿ ಓವರ್ಟನ್ 32 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು.
49.5 ಓವರ್ ಗಳಲ್ಲಿ 317 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ 8 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಈ ಗೆಲುವಿನ ಮೂಲಕ ಇಂಗ್ಲೆಂಡ್ ಸೆಮಿಫೈನಲ್ ಕನಸು ಭಗ್ನವಾಗಿದೆ. ಮಾರ್ಚ್ 1ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಔಪಚಾರಿಕವಾಗಿ ಆಡಲಿದೆ. ಅಫ್ಘಾನಿಸ್ತಾನ ಫೆಬ್ರವರಿ 28ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.












Click it and Unblock the Notifications