RCB: 'ಕಿಲ್ಲರ್ ಮಿಲ್ಲರ್' ಬೇಕು! ಆರ್ಸಿಬಿಗೆ ಎಬಿ ಡಿವಿಲಿಯರ್ಸ್ ಸಲಹೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದ್ದು ಯಾವ ಆಟಗಾರರು ಯಾವ ತಂಡದ ಪಾಲಾಗುತ್ತಾರೆ ಎನ್ನುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಬಲಿಷ್ಠ ತಂಡವನ್ನು ಕಟ್ಟಲು ಎಲ್ಲಾ ಫ್ರಾಂಚೈಸಿಗಳು ತಮ್ಮದೇ ಲೆಕ್ಕಾಚಾರ ಹಾಕಿಕೊಂಡಿದ್ದು, ಪ್ರಮುಖ ಆಟಗಾರರ ಮೇಲೆ ಕಣ್ಣಟ್ಟಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮೆಗಾ ಹರಾಜಿಗೆ ಮೂವರು ಆಟಗಾರರನ್ನು ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನು ಬಿಡುಗಡೆ ಮಾಡಿದೆ. 83 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿಸುವ ಲೆಕ್ಕಾಚಾರದಲ್ಲಿದೆ.
ದಕ್ಷಿಣ ಆಫ್ರಿಕಾ ಮತ್ತು ಆರ್ ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಮೆಗಾ ಹರಾಜಿಗೆ ಮುನ್ನ ತಮ್ಮಮಾಜಿ ತಂಡಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಆರ್ ಸಿಬಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅವರನ್ನು ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ.

ದಿನೇಶ್ ಕಾರ್ತಿಕ್ ಐಪಿಎಲ್ ನಿಂದ ನಿವೃತ್ತಿಯಾಗಿದ್ದು, ಈಗ ಆರ್ಸಿಬಿ ತಂಡಕ್ಕೆ ಫಿನಿಷರ್ ಅವಶ್ಯಕತೆ ಇದೆ. ಡೇವಿಡ್ ಮಿಲ್ಲರ್ 5-6 ನೇ ಕ್ರಮಾಂಕದಲ್ಲಿ ಆಡುವ ಆಟಗಾರ, ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾಗ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ, ಅಪಾರ ಅನುಭವ ಕೂಡ ಹೊಂದಿದ್ದು ಮಿಲ್ಲರ್ ಖರೀದಿಸಲು ಆರ್ಸಿಬಿ ಯೋಚಿಸಬಹುದು ಎಂದು ಹೇಳಿದ್ದಾರೆ.
ಆರ್ ಸಿಬಿ ತಂಡದ ಟಾಪ್ ಆರ್ಡರ್ ಬ್ಯಾಟಿಂಗ್ ಪ್ರಬಲವಾಗಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಬೇಕಾಗಿದೆ. ಫಿನಿಷರ್ ಪಾತ್ರಕ್ಕಾಗಿ ಆರ್ಸಿಬಿ ಕೂಡ ಹುಡುಕಾಟ ನಡೆಸುತ್ತಿದ್ದು ಡೇವಿಡ್ ಮಿಲ್ಲರ್, ಟಿಮ್ ಡೇವಿಡ್‌ರಂತಹ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗ ಬಲಿಷ್ಠಗೊಳಿಸಲು ಸಲಹೆ
ಈ ಬಾರಿ ಮೆಗಾ ಹರಾಜಿನಲ್ಲಿ ಆರ್ಸಿಬಿ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಗಮನ ಹರಿಸಬೇಕು ಎಂದು ಎಬಿಡಿ ಸಲಹೆ ಕೊಟ್ಟಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವುದು ಯಾವಾಗಲು ಸವಾಲಾಗಿದೆ, ಆದ್ದರಿಂದಲೇ ಅನುಭವ ಇರುವ ಬೌಲರ್ ಗಳನ್ನು ಖರೀದಿ ಮಾಡಲು ಫ್ರಾಂಚೈಸಿ ಯೋಚಿಸಬೇಕು ಎಂದಿದ್ದಾರೆ.
ಕಗಿಸೊ ರಬಾಡ, ರವಿಚಂದ್ರನ್ ಆಶ್ವಿನ್, ಯುಜ್ವೇಂದ್ರ ಚಹಾಲ್ ರಂತಹ ಅನುಭವಿಗಳು ಆರ್ಸಿಬಿ ತಂಡಕ್ಕೆ ಬೇಕಾಗಿದ್ದು, ಇವರನ್ನು ಸೇರಿಸಿಕೊಂಡರೆ ಬೌಲಿಂಗ್ ವಿಭಾಗ ಬಲಿಷ್ಠವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊಹಮ್ಮದ್ ಸಿರಾಜ್‌ರನ್ನು ಕೈಬಿಟ್ಟಿರುವ ಆರ್ಸಿಬಿ ಯಶ್ ದಯಾಳ್‌ರನ್ನು ಮಾತ್ರ ಉಳಿಸಿಕೊಂಡಿದೆ.
ಕಗಿಸೋ ರಬಾಡ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ನೂರ್ ಅಹಮದ್, ನವೀನ್ ಉಲ್ ಹಕ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ಮುಖೇಶ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಬೌಲರ್ ಗಳು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ 24 ಮತ್ತು 25ರಂದು ಜೆಡ್ಡಾದಲ್ಲಿ ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.












Click it and Unblock the Notifications