ವಿಶ್ವಕಪ್; ನ. 15ರಂದು ಭಾರತ v/s ನ್ಯೂಜಿಲೆಂಡ್ ಸೆಮಿಫೈನಲ್
ಬೆಂಗಳೂರು, ನವೆಂಬರ್ 12; ಐಸಿಸಿ ವಿಶ್ವಕಪ್ 2023ರ ಲೀಗ್ ಹಂತದ ಪಂದ್ಯಗಳು ಬಹುತೇಕ ಮುಕ್ತಾಯಗೊಂಡಿವೆ. ಇಂಗ್ಲೆಡ್ ವಿರುದ್ಧ ಸೋತ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಈ ಬಳಿಕ ಸೆಮಿಫೈನಲ್ ಲೆಕ್ಕಾಚಾರ ಅಂತಿಮಗೊಂಡಿದೆ.
ನವೆಂಬರ್ 15 ಮತ್ತು 16ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಫೈನಲ್‌ಗೆ ಬರಲು ಹೋರಾಟ ನಡೆಸಲಿವೆ.

ಶನಿವಾರ ನಡೆದ ಪಂದ್ಯದಲ್ಲಿ ಇಂಗ್ಲೆಡ್ ವಿರುದ್ಧ ಪಾಕಿಸ್ತಾನ ಸೋತು ವಿಶ್ವಕಪ್ ಟೂರ್ನಿಯಿಂದ ಹೊರ ಹೋಗಿದೆ. ಬಳಿಕ ಸೆಮಿಫೈನಲ್ ಚಿತ್ರಣ ಸಿಕ್ಕಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯ ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ಆರಂಭವಾಗಲಿದೆ. ಭಾರತ ಮತ್ತು ನೆದರ್ ಲೆಂಡ್ಸ್ ಮುಖಾಮುಖಿಯಾಗಲಿವೆ.
ನವೆಂಬರ್ 15ರಂದು ಸೆಮಿಫೈನಲ್; ಐಸಿಸಿ ವಿಶ್ವಕಪ್ ಟೂರ್ನಿ 2023ರ ಮೊದಲ ಸೆಮಿಫೈನಲ್ ಪಂದ್ಯ ನವಂಬರ್ 15ರಂದು ಮುಂಬೈನ ವಾಖಂಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ಫೈನಲ್ ತಲುಪಲು ಹೋರಾಟ ನಡೆಸಲಿವೆ. ಪಂದ್ಯ ಸೋತ ತಂಡ ವಿಶ್ವಕಪ್‌ನಿಂದ ಹೊರ ಹೋಗಲಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ 8 ಪಂದ್ಯಗಳನ್ನು ಆಡಿರುವ ಭಾರತ ಅಷ್ಟು ಪಂದ್ಯಗಳಲ್ಲಿ ಗೆಲ್ಲುವ ಮೂಲಕ 16 ಅಂಕಗಳನ್ನು ಪಡೆದು ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 9 ಪಂದ್ಯಗಳನ್ನು ಆಡಿದ್ದು, 5ರಲ್ಲಿ ಗೆಲುವು, 4ರಲ್ಲಿ ಸೋಲು ಕಂಡು 10 ಅಂಕಗಳನ್ನು ಪಡೆದು, ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿದೆ.
ಕಳೆದ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ಈ ಬಾರಿ ಪುನಃ ಎರಡೂ ತಂಡಗಳು ಫೈನಲ್ ತಲುಪಲು ಹೋರಾಟ ನಡೆಸಲಿವೆ. ಆದ್ದರಿಂದ ನವೆಂಬರ್ 15ರಂದು ನಡೆಯುವ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ವಿಶ್ವಕಪ್ ಸೋಲಿನ ಸೇಡನ್ನು ಭಾರತ ತೀರಿಸಿಕೊಳ್ಳಲಿದೆಯೇ? ಕಾದು ನೋಡಬೇಕಿದೆ.
ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಲಯದಲ್ಲಿರುವ ಭಾರತ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಯಾವುದೇ ಪಂದ್ಯ ಸೋತಿಲ್ಲ. ಆದ್ದರಿಂದ ನವೆಂಬರ್ 15ರ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆಲ್ಲಲಿದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ. ಅಭಿಮಾನಿಗಳು ಭಾರತ ತವರು ನೆಲದಲ್ಲಿ ಈ ಬಾರಿ ವಿಶ್ವಕಪ್ ಗೆಲ್ಲಬೇಕು ಎಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಲೀಗ್ ಪಂದ್ಯಾವಳಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು. ರೋಹಿತ್ ಶರ್ಮಾ ನಾಯಕತ್ವದ ಭಾರತ 4 ವಿಕೆಟ್‌ಗಳಿಂದ ಜಯಗಳಿಸಿತ್ತು. ಈಗ ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿವೆ. ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಮೂರು ಬಾರಿ ಭಾರತ ಮತ್ತು ನ್ಯೂಜಿಲೆಂಡ್ ಹೋರಾಟ ನಡೆಸಿವೆ. ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳ ಸೋಲು ಕಂಡಿತ್ತು. 2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ 18 ರನ್‌ಗಳಿಂದ ಜಯಗಳಿಸಿತ್ತು.
ಭಾರತ ಈಗಾಗಲೇ ಸೆಮಿಫೈನಲ್ ಪ್ರವೇಶ ಮಾಡಿದೆ. ಆದ್ದರಿಂದ ಭಾರತ-ನೆದರ್ ಲೆಂಡ್ಸ್ ನಡುವೆ ಭಾನುವಾರ ನಡೆಯಲಿರುವ ಪಂದ್ಯಕ್ಕೆ ಅಂತಹ ಮಹತ್ವವಿಲ್ಲ. ಆದರೆ ಭಾರತ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿಯುವ ಉತ್ಸಾಹದಲ್ಲಿದೆ. ದೀಪಾವಳಿ ಹಬ್ಬದ ಜೊತೆಗೆ ಬೆಂಗಳೂರಿನ ಜನರು ವಿಶ್ವಕಪ್ ಕೊನೆಯ ಲೀಗ್ ಪಂದ್ಯವನ್ನು ಇಂದು ಕಣ್ತುಂಬಿಕೊಳ್ಳಬಹುದಾಗಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಪಿಚ್ ಎಂದೇ ಖ್ಯಾತಿ ಪಡೆದಿದೆ. ಆದ್ದರಿಂದ ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ ಎಷ್ಟು ರನ್‌ಗಳಿಸಬಹುದು? ಎಂಬ ಲೆಕ್ಕಾಚಾರ ನಡೆಯುತ್ತಿದೆ. ನೆದರ್ ಲೆಂಡ್ಸ್ ಈ ಬಾರಿಯ ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿದೆ. 2 ಪಂದ್ಯದಲ್ಲಿ ಜಯಗಳಿಸುವ ಮೂಲಕ 4 ಪಾಯಿಂಟ್ಸ್‌ಗಳಿಸಿದೆ.












Click it and Unblock the Notifications