ಮಾರಿಕಾಂಬಾ ಜಾತ್ರೆಗೆ ಮೋದಿಗೆ ಆಹ್ವಾನಿಸಿದ ಶಿರಸಿಮಕ್ಕಿಯ ಬಾಲಕಿ
ಶಿರಸಿ, ನವೆಂಬರ್ 16: ಶಿರಸಿ ತಾಲೂಕಿನ ಶಿರಸಿಮಕ್ಕಿಯ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಈ ಬಾರಿಯ ಮಾರಿಕಾಂಬಾ ಜಾತ್ರೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಆಹ್ವಾನಿಸಿದ್ದಾಳೆ.
ಶಿರಸಿಮಕ್ಕಿ ಹಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಮೃತಾ ಪತ್ರದ ಮೂಲಕ ಮೋದಿಗೆ ಜಾತ್ರೆಗೆ ಬರುವಂತೆ ಆಹ್ವಾನಿಸಿದ್ದು, ಅಮೃತಾ ಬರೆದ ಪತ್ರಕ್ಕೆ ಮೋದಿಯವರ ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆ. ಅಂದ ಹಾಗೆ ಅಮೃತಾ ಬರೆದ ಪತ್ರ ಈ ಕೆಳಗಿನಂತಿದೆ.

'ಪ್ರೀತಿಯ ಮೋದಿ ಮಾಮಾ ನಿಮಗೆ ನನ್ನ ಸಾವಿರಾರು ಸಿಹಿ ಮುತ್ತುಗಳು. ಕರ್ನಾಟಕ ರಾಜ್ಯದ ಶಿರಸಿ ತಾಲೂಕಿನ ಪುಟ್ಟ ಹಳ್ಳಿಯವಳು ನಾನು. ನಿಮ್ಮಿಂದ ಪ್ರಭಾವಿತರಾಗಿರುವ ನಾವು ನಮ್ಮ ಶಾಲೆಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದೇವೆ.
ಕಾಗದದ ಚೂರು, ಚಾಕಲೇಟ್ ಕಾಗದವನ್ನು ರಸ್ತೆಗೆ ಎಸೆಯದೇ ಕಸದ ಬುಟ್ಟಿಗೆ ಎಸೆದರೆ ಮೋದಿಯವರು ಬಹುಮಾನ ನೀಡುತ್ತಾರೆ ಎಂದು ಅಮ್ಮ ಹೇಳಿದ್ದಾಳೆ. ಹಾಗಾಗಿ ನಾವು ಎಲ್ಲೆಂದರಲ್ಲಿ ಕಸ ಎಸೆಯುವುದಿಲ್ಲ. ಅಂದ ಹಾಗೆ ಈ ವರ್ಷ ಮಾರಿಕಾಂಬಾ ಜಾತ್ರೆ ನಡೆಯಲಿದೆ. ದಯವಿಟ್ಟು ನೀವು ನಮ್ಮ ಊರಿಗೆ ಬನ್ನಿ. ನಿಮಗಿದೋ ನನ್ನ ಪ್ರೀತಿಯ ಆಹ್ವಾನ. ಟಾಟಾ' - ಅಮೃತಾ, ಸರಕಾರಿ ಪ್ರಾಥಮಿಕ ಶಾಲೆ, ಶಿರಸಿಮಕ್ಕಿ
ಈ ರೀತಿಯಾಗಿ ಅಮೃತಾ ಪತ್ರದ ಮೂಲಕ ನರೇಂದ್ರ ಮೋದಿ ಅವರನ್ನು ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಆಹ್ವಾನಿಸಿದ್ದು, ಪತ್ರಕ್ಕೆ ಸ್ಪಂದಿಸಿ ಶಿರಸಿ ಜಾತ್ರೆಗೆ ಪ್ರಧಾನಿ ಆಗಮಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications