Breaking; ಶಿರಸಿ ಮಾರಿಕಾಂಬ ದೇವಿ ಪ್ರಸಾದಕ್ಕೆ BHOG ಪ್ರಮಾಣ ಪತ್ರ
ಶಿರಸಿ, ಆಗಸ್ಟ್ 05; ಉತ್ತರ ಕನ್ನಡದ ಶಿರಸಿಯ ಪ್ರಸಿದ್ಧ ಮಾರಿಕಾಂಬ ದೇವಾಲಯದಲ್ಲಿ ನೀಡುವ ಪ್ರಸಾದಕ್ಕೆ ಬಿಎಚ್‌ಒಜಿ ಪ್ರಮಾಣ ಪತ್ರ ಸಿಕ್ಕಿದೆ. ಸುಮಾರು ಒಂದು ಸಾವಿರ ಭಕ್ತರು ಪ್ರತಿನಿತ್ಯ ದೇವಾಲಯದಲ್ಲಿ ಪ್ರಸಾದ ಸ್ವೀಕಾರ ಮಾಡುತ್ತಾರೆ.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯಡಿ (ಎಫ್ಎಸ್ಎಸ್ಎಐ) ನೀಡುವ ಆನಂದಮಯ ನೈರ್ಮಲ್ಯ ಕೊಡುಗೆ ದೇವರಿಗೆ (ಬಿಎಚ್ಒಜಿ) ಪ್ರಮಾಣ ಪತ್ರವನ್ನು ಶಿರಸಿ ಮಾರಿಕಾಂಬ ದೇವಿಯ ಪ್ರಸಾದಕ್ಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಶಿರಸಿ ಮಾರಿಕಾಂಬ ಸೇರಿದಂತೆ 4 ದೇವಾಲಯಗಳಿಗೆ ಮಾತ್ರ ಬಿಎಚ್‌ಒಜಿ ಪ್ರಮಾಣ ಪತ್ರ ಸಿಕ್ಕಿದೆ. ಭಕ್ತರಿಗೆ ನೀಡುವ ಆಹಾರದ ಗುಣಮಟ್ಟ, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಪ್ರಮಾಣ ಪತ್ರವನ್ನು ನೀಡುವ ಮೊದಲು ಎಫ್ಎಸ್ಎಸ್ಎಐ ನೈವೇದ್ಯದ ಗುಣಮಟ್ಟ, ಭಕ್ತರಿಗೆ ನೀಡುವ ಪ್ರಸಾದದ ಗುಣಮಟ್ಟ, ಪ್ರಸಾದ ತಯಾರು ಮಾಡು ವಿಧಾನ, ಅಡುಗೆ ಮನೆಯ ನಿರ್ವಹಣೆ ಮುಂತಾದ ಅಂಶಗಳನ್ನು ಪರಿಶೀಲನೆ ಮಾಡುತ್ತದೆ.
ಎಫ್ಎಸ್ಎಸ್ಎಐ ಪ್ರಮಾಣ ಪತ್ರವು 116 ಅಂಕಗಳನ್ನು ಒಳಗೊಂಡಿದೆ. ಯಾವುದೇ ದೇವಾಲಯದ ಪ್ರಸಾದಕ್ಕೆ ಪ್ರಮಾಣ ಪತ್ರ ನೀಡಲು 90ಕ್ಕಿಂತ ಅಧಿಕ ಅಂಕಗಳು ಸಿಗುವುದು ಅಗತ್ಯವಾಗಿದೆ. ಶಿರಸಿ ಮಾರಿಕಾಂಬ ದೇವಾಲಯ 100 ಅಂಕಗಳನ್ನು ಪಡೆದಿದೆ.
ದೇವಾಯದ ಆಡಳಿತ ಮಂಡಳಿ ಅಧಿಕಾರಿಗಳು ಮಾತನಾಡಿದ್ದು, "ಸಾಕಷ್ಟು ಬೆಳಕು ಮತ್ತು ಗಾಳಿಯ ವ್ಯವಸ್ಥೆಯೊಂದಿಗೆ ನಾವು ಸುಸಜ್ಜಿತ ಅಡುಗೆ ಮನೆ ಸೌಲಭ್ಯ ಹೊಂದಿದ್ದೇವೆ. ಮಳೆ ಬಂದರೂ ಸೋರದ ಛಾವಣಿ, ಬಲವಾದ ಗೋಡೆಗಳು, ಉತ್ತಮ ನೆಲಹಾಸು ಇದೆ. ಗುಣಮಟ್ಟದ ಮತ್ತು ಶುದ್ಧ ಪಾತ್ರೆಗಳು, ಆಹಾರಕ್ಕಾಗಿ ವಸ್ತುಗಳನ್ನು ಸಂಗ್ರಹಿಸಲು ಉತ್ತಮ ಕೊಠಡಿ, ಪಾತ್ರೆ ಸ್ವಚ್ಛಗೊಳಿಸಲು ಶುದ್ಧ ನೀರು ಮತ್ತು ಕಸ ವಿಲೇವಾರಿ ವ್ಯವಸ್ಥೆಯೂ ಉತ್ತಮವಾಗಿದೆ" ಎಂದು ಹೇಳಿದ್ದಾರೆ.
ಮಲೆ ಮಹದೇಶ್ವರ ದೇವಾಲಯ; ಕೆಲವು ವರ್ಷಗಳ ಹಿಂದೆ ಚಾಮರಾಜನಗರದ ಪ್ರಸಿದ್ಧ ಶ್ರೀ ಮಲೆ ಮಹದೇಶ್ವರ ದೇವಾಲಯದಲ್ಲಿ ತಯಾರು ಮಾಡುವ ಲಡ್ಡು ಮತ್ತು ಆಹಾರಕ್ಕೆ ಎಫ್ಎಸ್ಎಸ್ಎಐ ಪ್ರಮಾಣ ಪತ್ರ ಸಿಕ್ಕಿತ್ತು.
ಎಫ್ಎಸ್ಎಸ್ಎಐ ಪ್ರಮಾಣ ಪತ್ರವು ಒಂದು ವರ್ಷಗಳ ಕಾಲ ಮಾನ್ಯತೆ ಹೊಂದಿರುತ್ತದೆ. ಕಾಯ್ದೆಯಡಿ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸುವ ಮೂಲಕ ಪ್ರತಿವರ್ಷ ಅದನ್ನು ನವೀಕರಣ ಮಾಡಬೇಕಿದೆ.












Click it and Unblock the Notifications