Linganamakki Dam: ಲಿಂಗನಮಕ್ಕಿ ಭರ್ತಿ, ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ
ಶಿವಮೊಗ್ಗ, ಜುಲೈ 24: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 1801.20 ಅಡಿಗಳು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಾರ್ಯ ನಿರ್ವಾಹಕ ಇಂಜಿನಿಯರ್ (ಕಾಮಗಾರಿ) ಲಿಂಗನಮಕ್ಕಿ ಜಲಾಶಯದ ಪ್ರವಾಹದ ಮೊದಲನೇ ಮುನ್ನೆಚ್ಚರಿಕೆಯ ಸೂಚನೆಯನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.

ಪ್ರಕಟಣೆಯ ವಿವರ: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನದಿನೇ ಏರುತ್ತಿರುತ್ತದೆ ಎಂದು ಹೇಳಿದ್ದಾರೆ.
ಈ ದಿನದ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 60,000 ಕ್ಯೂಸೆಕ್‌ಗಳಿಗಿಂತಲೂ ಅಧಿಕವಾಗಿದ್ದು ಇದೇ ರೀತಿಯಲ್ಲಿ ಜಲಾಶಯಕ್ಕೆ ಬರುವ ನೀರಿನ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಶೀಘ್ರದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.
ಆದ್ದರಿಂದ, ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು. ಆದ್ದರಿಂದ, ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ.
ಕರ್ನಾಟಕದ ವಿದ್ಯುತ್ ಉತ್ಪಾದನೆಯ ಪ್ರಮುಖ ಜಲಾಶಯ ಲಿಂಗನಮಕ್ಕಿ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿರುವ ಕಾರಣ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಶೀಘ್ರದಲ್ಲೇ ಭರ್ತಿಯಾಗಲಿದೆ. ಆದ್ದರಿಂದ ಶರಾವತಿ ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಡ್ಯಾಂನಿಂದ ನೀರು ಬಿಟ್ಟರೆ ವಿಶ್ವವಿಖ್ಯಾತ ಜೋಗ ಜಲಪಾತದ ಸೌಂದರ್ಯ ಇಮ್ಮಡಿಗೊಳ್ಳಲಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿಗೆ ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಡ್ಯಾಂನಿಂದ ಮುಂದೆ ಸಾಗುವ ನೀರು ಜೋಗ ಜಲಪಾತದ ಮೂಲಕ ಸಾಗಿ ಉತ್ತರ ಕನ್ನಡ ಜಿಲ್ಲೆಗೆ ಹರಿಯುತ್ತದೆ.
ಕಳೆದ ವರ್ಷ ಮಳೆ ಕೈ ಕೊಟ್ಟ ಕಾರಣ ಲಿಂಗನಮಕ್ಕಿ ಜಲಾಶಯ ತುಂಬಿರಲಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಡ್ಯಾಂ ನೀರಿನ ಮಟ್ಟ ತೀವ್ರವಾಗಿ ಕುಸಿತಕಂಡಿತ್ತು. ಆದ್ದರಿಂದ ಲಿಂಗನಮಕ್ಕಿ ಹಿನ್ನೀರಿನ ಲಾಂಚ್‌ಗಳನ್ನು ಸಹ ನಿಲ್ಲಿಸಲಾಗಿತ್ತು.
ಆದರೆ ಈ ಬಾರಿ ಜೂನ್ ಅಂತ್ಯದಿಂದಲೇ ಉತ್ತಮ ಮಳೆಯಾಗಿದ್ದು, ಲಿಂಗನಮಕ್ಕಿ ಡ್ಯಾಂ ಭರ್ತಿಯಾಗುವ ಹಂತ ತಲುಪಿದೆ. ಈ ಬಾರಿ ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ಜಲಾಶಯದೊಳಗಿರುವ ಮಡೆನೂರು ಹಿರೇಭಾಸ್ಕರ ಅಣೆಕಟ್ಟು ಸಹ ಗೋಚರವಾಗಿತ್ತು. ಸುಮಾರು 6 ದಶಕಗಳಿಂದ ಲಿಂಗನಮಕ್ಕಿ ಅಣೆಕಟ್ಟಿನ ನೀರಿನಲ್ಲಿಯೇ ಮುಳಗಿದ ಡ್ಯಾಂ ಇದಾಗಿದೆ.
ಶರಾವತಿ ವಿದ್ಯುದಾಗಾರದ ಮೊದಲ ಅಣೆಕಟ್ಟಾಗಿ ಹಿರೇಭಾಸ್ಕರ ಡ್ಯಾಂ ನಿರ್ಮಾಣ ಮಾಡಲಾಗಿತ್ತು. 1939ರಲ್ಲಿ ನಾಲ್ವಾಡಿ ಕೃಷ್ಣರಾಜ ಒಡೆಯರ್ ಈ ಯೋಜನೆಗೆ ಜೋಗದಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಸುಣ್ಣ ಹಾಗೂ ಇಟ್ಟಿಗೆ ಚೂರುಗಳ ಮಿಶ್ರಣದ ಸುರ್ಕಿಯಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ದಾಖಲೆ ಹೇಳುತ್ತದೆ.












Click it and Unblock the Notifications