ಯಡಿಯೂರಪ್ಪ ಕೇಸರಿ ನೆಲದಲ್ಲಿ ಸಿದ್ದರಾಮಯ್ಯ 'ಜಾತ್ಯತೀತ' ಸವಾರಿ
Recommended Video

ಶಿವಮೊಗ್ಗ, ಅಕ್ಟೋಬರ್ 25: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಣದಲ್ಲಿ ಗುರುವಾರ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹಣಾಹಣಿಗೆ ವೇದಿಕೆಯಾಗಲಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ರಾಜಿನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ಪುತ್ರ ಬಿವೈ ರಾಘವೇಂದ್ರ ಅವರನ್ನು ಕಣಕ್ಕಿಳಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು( ಅಕ್ಟೋಬರ್ 25)ರಂದು ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಮತ ಯಾಚನೆ ನಡೆಸಲಿದ್ದಾರೆ.
ಕುತೂಹಲದ ಸಂಗತಿ ಎಂದರೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಇಂದೇ ತಮ್ಮ ಸ್ವಂತ ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದು, ಉಭಯ ನಾಯಕರ ನಡುವೆ ವಾಗ್ದಾಳಿ ನಿರೀಕ್ಷಿಸಲಾಗುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸಾಥ್ ನೀಡಿದರೆ ಮಾಜಿ ಸಿಎಂಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಹಾಗೂ ಮಧು ಬಂಗಾರಪ್ಪ ಹಿರಿಯ ಸಹೋದರ ಕುಮಾರ್ ಬಂಗಾರಪ್ಪ ಸಾಥ್ ನೀಡಲಿದ್ದಾರೆ. ಈಗಾಗಲೇ ಮಾಜಿ ಸಚಿವ ಬಿ ಶ್ರೀರಾಮುಲು ಅವರ ವಿರುದ್ಧ ಸಿದ್ದರಾಮಯ್ಯ 420 ಎಂಬ ಶಬ್ಧ ಬಳಸಿದ್ದು ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.
ಯಡಿಯೂರಪ್ಪ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ಇದು ಯಾವ ಹಂತ ತಲುಪುತ್ತದೆ ಎಂಬ ಕುತೂಹಲವೂ ಉಂಟಾಗಿದೆ, ಈ ನಡುವೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಒಂದೇ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿರುವುದು ಚುನಾವಣಾ ಕಣಕ್ಕೆ ಹೊಸ ರಂಗು ತರಲಿದೆ ಎಂದು ಹೇಳಲಾಗುತ್ತಿದೆ.
ಬೆಳಗ್ಗೆ ಯಡಿಯೂರಪ್ಪ ಶಿಕಾರಿಪುರ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದು ಸಿದ್ದರಾಮಯ್ಯ ಕೂಡ ಬೆಳಗ್ಗೆಯಿಂದ ಸಂಜೆಯವರೆಗೂ ಕ್ಷೇತ್ರದ ನಾನಾ ಕಡೆ ಪ್ರಚಾರ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶಿಕಾರಿಪುರ ತಾಲೂಕಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ, 4.30ಕ್ಕೆ ಭದ್ರಾವತಿ, 6.30ಕ್ಕೆ ಶಿವಮೊಗ್ಗಕ್ಕೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.












Click it and Unblock the Notifications