ಚಿತ್ರಗಳಲ್ಲಿ: ಶಿವಮೊಗ್ಗದಲ್ಲಿ ಗುರುವಾರ ನಡೆದಿದ್ದೇನು?
ಶಿವಮೊಗ್ಗ, ಫೆ. 20: ಶಿವಮೊಗ್ಗ ನಗರದಲ್ಲಿ ಗುರುವಾರ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು ನಿಷೇಧಾಜ್ಞೆಯನ್ನು ಫೆಬ್ರವರಿ 25ರವರೆಗೆ ವಿಸ್ತರಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.
ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗುಂಪು ಘರ್ಷಣೆ ಆರಂಭವಾಯಿತು. ಮೆರವಣಿಗೆ ವೇಳೆ ಹಿಂದು ಸಂಘಟನೆಗಳ ವಿರುದ್ಧ ಆಕ್ಷೇಪಾರ್ಹ ಘೊಷಣೆಗಳು ಕೇಳಿಬಂದವು. ಇದನ್ನು ಹಿಂದು ಸಂಘಟನೆ ನಾಯಕರು ಪ್ರಶ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆ ಉಂಟಾಗಿದೆ.[ಶಿವಮೊಗ್ಗ: ಗುಂಪು ಘರ್ಷಣೆ, ನಿಷೇಧಾಜ್ಞೆ ಜಾರಿ]
ಗಲಭೆಗೆ ಒಬ್ಬ ಬಲಿ: ಕಿಡಿಗೇಡಿಗಳು ನಗರದ ಹಲವೆಡೆ ಬೈಕ್‌ಗಳಿಗೆ ಬೆಂಕಿ ಇಟ್ಟಿದ್ದು ಪರಿಸ್ಥಿತಿಯನ್ನು ಹದಗೆಡಿಸಿತ್ತು. ರಾತ್ರಿ 9 ಗಂಟೆ ವೇಳೆ ಗಾಜನೂರು ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದ ವಿಶ್ವನಾಥ್ ಮೇಲೆ ಸಮಾವೇಶಕ್ಕೆ ಬಂದಿದ್ದ ಗುಂಪೊಂದು ಹಲ್ಲೆ ನಡೆಸಿದೆ. ತೀವ್ರ ಗಾಯಗೊಂಡ ವಿಶ್ವನಾಥ್‌ರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಜತೆಗಿದ್ದ ಮತ್ತಿಬ್ಬರ ಮೇಲೆ ಹಲ್ಲೆ ಮಾಡಲಾಗಿದ್ದು ಗಂಭೀರ ಗಾಯಗೊಂಡಿದ್ದಾರೆ.
ಮೃತ ವಿಶ್ವನಾಥ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಲ್ಲದೇ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಬೈಕ್ ಗೆ ಬೆಂಕಿ
ಕಿಡಿಗೇಡಿಗಳು ದ್ವಿಚಕ್ರ ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ.

ಕಲ್ಲು ತೂರಾಟ
ಶಿವಮೊಗ್ಗ ನಗರದ ಗಾಂಧಿಬಜಾರ್ ಸೇರಿದಂತೆ ಅನೇಕ ಕಡೆ ಕಲ್ಲು ತೂರಾಟ ನಡೆದ ನಂತರದ ದೃಶ್ಯ.

ಪರಿಸ್ಥಿತಿ ನಿಯಂತ್ರಣ
ಗಲಭೆಕೋರರನ್ನು ಹಿಡಿದು ಪರಿಸ್ಥಿತಿ ಹತೋಟಿಗೆ ತರಲು ಶ್ರಮಿಸುತ್ತಿರುವ ಪೊಲೀಸರು.

ಸುಟ್ಟು ಕರಕಲಾದ ಬೈಕ್
ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಸುಟ್ಟು ಕರಕಲಾದ ಬೈಕ್.

ನಿಷೇಧಾಜ್ಞೆ ಜಾರಿ
ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಜನ ಸಂಚಾರ ಬಂದ್ ಆಗಿದೆ.











Click it and Unblock the Notifications