ಉಂಬ್ಳೆಬೈಲು; ಅನುಮಾನಾಸ್ಪದವಾಗಿ 10 ಮಂಗಗಳ ಸಾವು, ಕಣಗಲಸರ ಗ್ರಾಮಸ್ಥರಲ್ಲಿ ಆತಂಕ
ಶಿವಮೊಗ್ಗ, ಅಕ್ಟೋಬರ್, 07: ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗಲಸರ ಗ್ರಾಮದ ಸಮೀಪದಲ್ಲಿರುವ ಗಣಪತಿ ದೇವಸ್ಥಾನದ ಸಮೀಪದಲ್ಲಿ ಸುಮಾರು ಹತ್ತು ಮಂಗಗಳು ಸಾವನ್ನಪ್ಪಿವೆ. ಇದು ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ.
ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗಲಸರ ಗ್ರಾಮದ ಸಮೀಪದಲ್ಲಿರುವ ಆನೆಕಲ್ಲು ಉದ್ಭವ ಗಣಪತಿ ದೇವಸ್ಥಾನದ ಸಮೀಪ ಈ ಘಟನೆ ಸಂಭವಿಸಿವೆ. ಸುಮಾರು ಹತ್ತು ಮಂಗಗಳು ಮೃತಪಟ್ಟಿರುವುದನ್ನು ಕಂಡು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಮಂಗಗಳು ಸಾವನ್ನಪ್ಪಿರುವ ವಿಚಾರ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಸ್ಥಳಕ್ಕೆ ದೌಡಾಯಿಸಿದರು. ಸ್ಥಳದಲ್ಲೇ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ, ವೈಜ್ಞಾನಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.

ಮಂಗಗಳ ಸಾವು, ಜನರಲ್ಲಿ ಹೆಚ್ಚಿದ ಆತಂಕ
ಇಷ್ಟೊಂದು ಮಂಗಗಳು ಒಟ್ಟಿಗೆ ಸಾವನ್ನಪ್ಪಲು ಕಾರಣವೇನು ಅನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಬೇಕಿದೆ. ವಿಷ ಪ್ರಾಶನದಿಂದ ಮಂಗಗಳು ಸಾವನ್ನಪ್ಪಿವೆ ಎಂದು ಶಂಕೆ ವ್ಯಕ್ತವಾಗಿವೆ. ಮರಣೋತ್ತರ ಪರೀಕ್ಷೆ ಬಳಿಕ ಮಂಗಗಳ ಸಾವಿಗೆ ಕಾರಣ ಏನೆಂದು ತಿಳಿಯಲಿದೆ.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಬಿ.ಜೆ.ತೇಜ, ಪಶು ವೈದ್ಯಾಧಿಕಾರಿ ಮಹದೇವ ಶರ್ಮಾ, ಹಿರಿಯ ಪಶು ಪರೀಕ್ಷಕ ಎನ್.ಎಸ್.ರಮೇಶ್, ಮೆಗ್ಗಾನ್ ಆಸ್ಪತ್ರೆಯ ವೈದ್ಯ ಡಾ. ರಘುಪ್ರಸಾದ್, ಗ್ರಾಮ ಪಂಚಾಯಿತಿ ಪಿಡಿಒ ಅಮಿತ್ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಮಂಗಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.












Click it and Unblock the Notifications