ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಜ್ ಪರಸ್ಪರ ಡಿಕ್ಕಿ; ತಪ್ಪಿದ ಅನಾಹುತ
ಶಿವಮೊಗ್ಗ, ಸೆಪ್ಟೆಂಬರ್ 11: ಸಿಗಂಧೂರೇಶ್ವರಿ ದೇವಾಲಯಕ್ಕೆ ಹೋಗುವ ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಜ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ 200 ಪ್ರಯಾಣಿಕರು ಪಾರಾಗಿದ್ದಾರೆ.
ಅಂಬಾರಗೋಡ್ಲು ದಡದಲ್ಲಿ ಬಾರ್ಜ್ ಗಳನ್ನು ತಿರುಗಿಸುವ ಸಂದರ್ಭ ಎರಡು ಲಾಂಜ್ ಗಳು ಡಿಕ್ಕಿ ಹೊಡೆದಿವೆ. ಹೀಗಾಗಿ ಎರಡೂ ಬಾರ್ಜ್ ಗಳು ಜಖಂಗೊಂಡಿವೆ. ನದಿಯ ಮಧ್ಯಭಾಗದಲ್ಲಿಯೇ ಈ ಅಪಘಾತ ನಡೆದಿದ್ದು, ಎರಡೂ ಲಾಂಜ್ ಗಳಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಾಡಾನೆ ಹಿಂಡಿಗೆ ಆಗುವ ಡಿಕ್ಕಿ ತಪ್ಪಿಸುವ ಯತ್ನದಲ್ಲಿ ಹಳ್ಳಕ್ಕೆ ಉರುಳಿದ ಬಸ್
ಚಾಲಕರ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಳಿಕವೂ ಎಂದಿನಂತೆ ಬಾರ್ಜ್ ಗಳು ಸಂಚಾರ ನಡೆಸುತ್ತಿವೆ.
ಈ ಘಟನೆ ಕುರಿತು ಒಳನಾಡು ಬಂದರು ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, "ಘಟನೆ ಸಂಬಂಧ ಚಾಲಕರನ್ನು ಅಮಾನತುಗೊಳಿಸಿ ತನಿಖೆ ನಡೆಸಲಾಗುವುದು. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು" ಎಂದು ತಿಳಿಸಿದ್ದಾರೆ.