Shivamogga Airport: ಶಿವಮೊಗ್ಗದಿಂದ ಎರಡು ನಗರಕ್ಕೆ ವಿಮಾನ ಸೇವೆ ಆರಂಭ

ಶಿವಮೊಗ್ಗ, ಅಕ್ಟೋಬರ್ 10: ಶಿವಮೊಗ್ಗದ ಜನರಿಗೆ ಸಿಹಿಸುದ್ದಿ. ಗುರುವಾರದಿಂದ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಎರಡು ಹೊಸ ವಿಮಾನ ಸೇವೆಗಳು ಆರಂಭವಾಗಿದೆ. ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಈ ವಿಮಾನ ಸೇವೆ ಪ್ರಾರಂಭಿಸಿದೆ. ಈಗಾಗಲೇ ಶಿವಮೊಗ್ಗದಿಂದ ಬೆಂಗಳೂರು, ಗೋವಾ, ತಿರುಪತಿಗೆ ವಿಮಾನ ಸಂಚಾರವನ್ನು ನಡೆಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು 27.02.2023ರಂದು ಲೋಕಾರ್ಪಣೆ ಮಾಡಿದ್ದರು.

ಗುರುವಾರ ಸ್ಪೈಸ್‌ ಜೆಟ್ ವಿಮಾನಯಾನ ಸಂಸ್ಥೆ ಶಿವಮೊಗ್ಗ-ಚೆನ್ನೈ ಮತ್ತು ಶಿವಮೊಗ್ಗ-ಹೈದರಾಬಾದ್ ಮಾರ್ಗದಲ್ಲಿ ವಿಮಾನ ಸೇವೆಯನ್ನು ಆರಂಭಿಸಿದೆ. ನೂತನ ವಿಮಾನಗಳ ಸಂಚಾರಕ್ಕೆ ಸಂಸದ ಬಿ. ವೈ. ರಾಘವೇಂದ್ರ ಹಸಿರು ನಿಶಾನೆ ತೋರಿಸಿದರು. ಸಂಸ್ಥೆಯ ಸಿಬ್ಬಂದಿಗಳಿಗೆ ಮತ್ತು ಪ್ರಯಾಣಿಕರಿಗೆ ಶುಭ ಹಾರೈಸಿದರು.

SpiceJet Introduces New Flights Connecting Shivamogga To Hyderabad And Chenni

ಇಷ್ಟು ದಿನ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಮತ್ತು ಇಂಡಿಗೋ ಮಾತ್ರ ವಿಮಾನ ಸೇವೆಯನ್ನು ನೀಡುತ್ತಿದ್ದವು. ಈಗ ಸ್ಪೈಸ್‌ ಜೆಟ್ ಸಹ ವಿಮಾನ ಸೇವೆ ಆರಂಭಿಸುವ ಮೂಲಕ ಶಿವಮೊಗ್ಗ ನಗರಕ್ಕೆ ಮತ್ತೊಂದು ವಿಮಾನಯಾನ ಸಂಸ್ಥೆ ಪಾದಾರ್ಪಣೆ ಮಾಡಿದೆ. ಈ ವಿಮಾನ ಸೇವೆಯ ಮೂಲಕ ಮಲೆನಾಡು ಭಾಗದಿಂದ ಹೈದರಾಬಾದ್ ಮತ್ತು ಚೆನ್ನೈಗೆ ಪ್ರಯಾಣಿಸುವ ಜನರಿಗೆ ಅನುಕೂಲವಾಗಿದೆ.

ಸೆಪ್ಟೆಂಬರ್ 22ರಂದು ಸ್ಪೈಸ್ ಜೆಟ್ ಸಂಸ್ಥೆ ಶಿವಮೊಗ್ಗಕ್ಕೆ ಆಗಮಿಸುತ್ತೇವೆ ಎಂದು ಹೇಳಿತ್ತು. ತನ್ನ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 10 ರಿಂದ ಶಿವಮೊಗ್ಗ-ಹೈದರಾಬಾದ್ ಮತ್ತು ಶಿವಮೊಗ್ಗ-ಚೆನ್ನೈ ಮಾರ್ಗದಲ್ಲಿ ವಿಮಾನ ಸೇವೆ ಆರಂಭವಾಗಲಿದ್ದು, ಬುಕ್ಕಿಂಗ್ ಪ್ರಾರಂಭವಾಗಿದೆ ಎಂದು ಘೋಷಣೆ ಮಾಡಿತ್ತು.

ವಿಮಾನದ ವೇಳಾಪಟ್ಟಿ: ಸ್ಪೈಸ್‌ ಜೆಟ್ ಮಾಹಿತಿಯಂತೆ ಚೆನ್ನೈ-ಶಿವಮೊಗ್ಗ ನಡುವಿನ ವಿಮಾನ ಬೆಳಗ್ಗೆ 10:40ಕ್ಕೆ ಹೊರಟು, ಮಧ್ಯಾಹ್ನ 12:10ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗ-ಚೆನ್ನೈ ವಿಮಾನ ಸಂಜೆ 4:25ಕ್ಕೆ ಹೊರಟು, ಸಂಜೆ 5:55ಕ್ಕೆ ತಲುಪಲಿದೆ.

ಶಿವಮೊಗ್ಗ-ಹೈದರಾಬಾದ್ ವಿಮಾನ ಮಧ್ಯಾಹ್ನ 12:35ಕ್ಕೆ ಶಿವಮೊಗ್ಗದಿಂದ ಹೊರಟು, ಮಧ್ಯಾಹ್ನ 2:05ಕ್ಕೆ ತಲುಪಲಿದೆ. ಅದೇ ರೀತಿ ಹೈದರಾಬಾದ್‌-ಶಿವಮೊಗ್ಗ ವಿಮಾನ ಮಧ್ಯಾಹ್ನ 2:40ಕ್ಕೆ ಹೊರಟು, ಸಂಜೆ 4:10ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ.

27.02.2023ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಯಿತು. ಇಂಡಿಗೋ ಏರ್‌ಲೈನ್ಸ್ 31.08.2023ರಿಂದ ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ಹಗಲು ಹೊತ್ತಿನ ವಿಮಾನ ಸೇವೆ ಆರಂಭಿಸಿತು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಲ್ಯಾಂಡ್ ಮಾಡುವ ಸೌಲಭ್ಯಕ್ಕಾಗಿ ಕಾಮಗಾರಿ ನಡೆಯುತ್ತಿದೆ, ಶೀಘ್ರವೇ ಅದು ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆ ನೀಡುತ್ತಿವೆ. ಈಗ ಸ್ಪೈಸ್‌ ಜೆಟ್‌ ಸಹ ಶಿವಮೊಗ್ಗಕ್ಕೆ ಆಗಮಿಸಿದೆ. ಈಗ ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ತಿರುಪತಿ, ಗೋವಾಕ್ಕೆ ವಿಮಾನ ಸೇವೆ ಇದ್ದು, ಚೆನ್ನೈ ಹೊಸ ಸೇರ್ಪಡೆ. ಅಲ್ಲದೇ ಹೈದರಾಬಾದ್‌ಗೆ ಮತ್ತೊಂದು ವಿಮಾನ ಆರಂಭವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇನ್ನೂ ಸಹ ಹೆಸರು ಇಟ್ಟಿಲ್ಲ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು. ಮಲೆನಾಡು ಜಿಲ್ಲೆಗೆ ವಿಮಾನ ಸೇವೆ ಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸಾಗಿತ್ತು. ಅವರು 2019ರಲ್ಲಿ ಮುಖ್ಯಮಂತ್ರಿಯಾದಾಗ ಯೋಜನೆಗೆ ಇದ್ದ ಅಡೆತಡೆ ನಿವಾರಣೆ ಮಾಡಿ ವಿಮಾನ ನಿಲ್ದಾಣ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದ್ದರು.

ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿರುವ ವಿಮಾನ ನಿಲ್ದಾಣ ರಾಜ್ಯದ 3ನೇ ಉದ್ದದ ರನ್‌ವೇಯನ್ನು ಹೊಂದಿದೆ. ಏರ್ ಬಸ್ ಮಾದರಿಯ ವಿಮಾನಗಳನ್ನು ಸಹ ಇಳಿಸಲು ಅನುಕೂಲವಾಗುವಂತೆ ವಿಮಾನ ನಿಲ್ದಾಣದ ರನ್ ವೇ ವಿನ್ಯಾಸ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+