ಸ್ಮಾರ್ಟ್ ಸಿಟಿ; ರಸ್ತೆ ಗುಂಡಿ ಮುಚ್ಚಿದ ಶಿವಮೊಗ್ಗ ಪೊಲೀಸರು!
ಶಿವಮೊಗ್ಗ, ನವೆಂಬರ್ 10; ಸ್ಮಾರ್ಟ್ ಸಿಟಿ ಕಾಮಗಾರಿಯ ನಿಧಾನಗತಿಗೆ ಶಿವಮೊಗ್ಗದಲ್ಲಿ ವಾಹನ ಚಾಲಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತಿ ರಸ್ತೆಯೂ ಗುಂಡಿಮಯವಾಗಿದೆ. ಈ ಮಧ್ಯೆ ಸಂಚಾರಿ ಪೊಲೀಸರು ಗುಂಡಿಗಳಿಗೆ ಮಣ್ಣು ಹಾಕಿ ವಾಹನ ಸವಾರರಿಗೆ ನೆರವಾಗಿದ್ದಾರೆ. ಪೊಲೀಸರ ಕಾರ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈಲ್ ಸರ್ಕಲ್‌ನಲ್ಲಿ ಕುವೆಂಪು ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಲಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಸರಿಯಾಗಿ ಮಣ್ಣು ಮುಚ್ಚಿಸದೇ ಇರುವುದರಿಂದ ವಾಹನ ಸವಾರರು ಇಲ್ಲಿ ಸಂಚರಿಸಲು ಪರದಾಡುತ್ತಿದ್ದರು. ಇದನ್ನು ನೋಡಿದ ಸಂಚಾರಿ ಠಾಣೆ ಪೊಲೀಸರು ತಾವೇ ಮಣ್ಣು ಹಾಕಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ; ಕಂಡಕಂಡಲ್ಲಿ ಗುಂಡಿ, ಮಳೆಯಲ್ಲಿ ಸಂಕಷ್ಟ!
ಸಂಚಾರಿ ಠಾಣೆ ಎಎಸ್ಐ ಮಂಜುನಾಥ್, ಚಾಲಕ ಪ್ರಕಾಶ್, ಸಿಬ್ಬಂದಿ ಹನುಮಂತಪ್ಪ ಜೈಲ್ ಸರ್ಕಲ್‌ನಲ್ಲಿ ಗುಂಡಿ ಮುಚ್ಚಿದ್ದಾರೆ. ಪಕ್ಕದಲ್ಲಿದ್ದ ಮಣ್ಣು ತಂದು ತಾವೇ ಗುಂಡಿಗೆ ಸುರಿದು ಸಮತಟ್ಟು ಮಾಡಿದ್ದಾರೆ. ಇದರಿಂದ ವಾಹನ ಸವಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಸ್ಮಾರ್ಟ್ ಸಿಟಿ ಶಿವಮೊಗ್ಗ; ಗುಂಡಿಗೆ ಬೀಳುತ್ತಲೇ ಇವೆ ವಾಹನಗಳು
ಗುಂಡಿಗಳು ಸಾರ್ ಗುಂಡಿಗಳು; ಕುವೆಂಪು ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೆಲಸ ಆರಂಭಿಸಿದಾಗಿನಿಂದ ವಾಹನ ಸವಾರರು ನಿತ್ಯ ನರಕ ದರ್ಶನ ಮಾಡುತ್ತಿದ್ದಾರೆ. ಒಮ್ಮೆ ಗುಂಡಿ ತೋಡಿ ಮುಚ್ಚಲಾಗಿತ್ತು. ಈಗ ಪುನಃ ಗುಂಡಿ ಅಗೆಯಲಾಗಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಭಾರಿ ಗೋಲ್ಮಾಲ್; ರಸ್ತೆ ತಡೆ
ಜೈಲ್ ಸರ್ಕಲ್ ಕಡೆಯಿಂದ ನಂಜಪ್ಪ ಆಸ್ಪತ್ರೆ ಕಡೆಗೆ ಹೋಗುವ ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಲಾಗಿದೆ. ಈ ಗುಂಡಿಯಿಂದಾಗಿ ಹಲವು ವಾಹನ ಸವಾರರು ಗಾಯಗೊಂಡಿದ್ದಾರೆ. ವಾಹನಗಳಿಗೆ ಕೂಡ ಹಾನಿಯಾಗಿವೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳು ಗುಂಡಿಗೆ ಸರಿಯಾಗಿ ಮಣ್ಣು ಮುಚ್ಚಿರಲಿಲ್ಲ. ಹಾಗಾಗಿ ವಾಹನಗಳು ಓಡಾಡುವಾಗ ಗುಂಡಿಯ ಆಳ ಹೆಚ್ಚಾಗಿ ವಾಹನಗಳಿಗೆ ಹಾನಿಯಾಗುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ತಾವೇ ಮಣ್ಣು ಮುಚ್ಚಿದ್ದಾರೆ.

ಗುಂಡಿ ತೋಡಿ ತಿಂಗಳುಗಟ್ಟಲೆ ಹಾಗೆ ಬಿಡುವುದರಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೆಸರುವಾಸಿ. ಕುವೆಂಪು ರಸ್ತೆಯಲ್ಲಿ ಈ ಗುಂಡಿಗೆ ಬಿದ್ದು ಹಲವರು ಗಾಯಗೊಂಡಿದ್ದಾರೆ. ಎರಡು ತಿಂಗಳ ಹಿಂದೆ ಬೈಕ್ ಸವಾರರೊಬ್ಬರು ಬೈಕ್ ಸಹಿತ ಗುಂಡಿಗೆ ಬಿದ್ದು ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಆರೈಕೆ ಮಾಡಿದ್ದರು.
ನಿಧಾನಗತಿ ಮತ್ತು ಸರಿಯಾದ ಯೋಜನೆ ಇಲ್ಲದೇ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಜನರು ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಈ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ? ಎಂಬುದು ಜನರ ಪ್ರಶ್ನೆಯಾಗಿದೆ.
ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ; ಗುಂಡಿಗಳಿಂದಾಗಿ ಶಿವಮೊಗ್ಗ ನಗರದಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ. ಅದರಲ್ಲೂ ಜೈಲ್ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಕುವೆಂಪು ರಸ್ತೆ, ಜೈಲ್ ರೋಡ್ ನಲ್ಲಿ ಎರಡು ಬದಿಯಲ್ಲಿ ದೊಡ್ಡ ವಾಹನಗಳು ಎದುರಾದರೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ.
ಬೆಂಗಳೂರು ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ರಸ್ತೆಯ ತುಂಬೆಲ್ಲ ಗುಂಡಿಗಳು ಇರುವುದರಿಂದ ವಾಹನ ಚಾಲನೆ ಕಷ್ಟಕರವಾಗಿದೆ. ಇದೆಲ್ಲದರ ನಡುವೆ ಮಳೆ ಸುರಿದರಂತೂ ಶಿವಮೊಗ್ಗ ನಗರದಲ್ಲಿ ವಾಹನ ಚಾಲಕರು ಮೈಯ್ಯಲ್ಲ ಕಣ್ಣಾಗಿಸಿಕೊಂಡು ರಸ್ತೆಗಿಳಿಬೇಕಾಗುತ್ತದೆ.
ವರ್ಷಗಟ್ಟಲೆ ನಡೆಯುತ್ತವೆ ಕಾಮಗಾರಿ; ಸ್ಮಾರ್ಟ್ ಸಿಟಿ ಅಧಿಕಾರಿಗಳು ರಸ್ತೆ ಕಾಮಗಾರಿಗಳನ್ನು ಶೀಘ್ರ ಮುಗಿಸುವ ಯೋಚನೆಯನ್ನು ಮಾಡುವುದಿಲ್ಲ. ವಿನೋಬನಗರ ನೂರು ಅಡಿ ರಸ್ತೆ ರಿಪೇರಿ ಕಾರ್ಯ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಮುಗಿದಿಲ್ಲ.
ಸಾಲು ಸಾಲು ಅಪಘಾತಗಳು ಸಂಭವಿಸಿ, ವ್ಯಕ್ತಿಯೊಬ್ಬರು ಮೃತಪಟ್ಟ ಮೇಲೆ ಕಾಮಗಾರಿ ಚುರುಕು ಪಡೆದಿತ್ತು. ಈ ವೇಳೆ ಜನರು ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಪೊಲೀಸರ ವಿರುದ್ಧವೂ ಗರಂ ಆಗಿದ್ದರು. ಈಗ ಜೈಲ್ ಸರ್ಕಲ್ ನಲ್ಲಿ ಪೊಲೀಸರೇ ಗುಂಡಿ ಮುಚ್ಚುವ ಮೂಲಕ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮೌನವಾಗಿಯೇ ಬಿಸಿ ಮುಟ್ಟಿಸಿದ್ದಾರೆ.