ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಬೇಡಿಕೆಗಳು
ಕೋಲಾರ, ಜನವರಿ 10: ಶಿವಮೊಗ್ಗ-ಶಿಕಾರಿಪುಉ-ರಾಣೆಬೆನ್ನೂರು ರೈಲು ಮಾರ್ಗ ಯೋಜನೆಗೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ರೈಲು ಮಾರ್ಗಕ್ಕಾಗಿ ಬಳಸಿಕೊಳ್ಳುವ ಕುಷ್ಕಿ ಜಮೀನಿಗೆ ಪ್ರತಿ ಎಕರೆಗೆ 1.5 ಕೋಟಿ ರೂ. ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ನಿರಾಶ್ರಿತ ರೈತರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹಾಗೂ ಸಂಸದ ಬಿ. ವೈ. ರಾಘವೇಂದ್ರ ಅವರಿಗೆ ಮನವಿಯನ್ನು ಮಾಡಿದ್ದಾರೆ.
ಉದ್ದೇಶಿತ ರೈಲು ಮಾರ್ಗದ ಕೊನಗವಳ್ಳಿ, ಸೇವಾಲಾಲ್ ನಗರ, ಮುದುವಾಲ, ರಾಮನಗರ, ಕೊಂಡಜ್ಜಿ, ಮಲ್ಲಾಪುರ, ನಾರಾಯಣಪುರ ಮತ್ತು ನ್ಯಾಮತಿ ತಾಲೂಕಿನ ಲಕ್ಕಿನಕೊಪ್ಪ, ಸುರಗೊಂಡನಕೊಪ್ಪ ಗ್ರಾಮಗಳಲ್ಲಿ ರೈತರಿಗೆ ಮಾಹಿತಿ ಇಲ್ಲದೇ ಸರ್ವೆ ಮಾಡಲಾಗಿದೆ. ಇದನ್ನು ರೈತರು ತಡೆದಿದ್ದಾರೆ.

ಸಂಸದರು, ಶಾಸಕರು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ರೈಲ್ವೆ ಇಲಾಖೆ ಭೂಸ್ವಾಧೀನಾಧಿಕಾರಿಗಳು ಸೂಕ್ತ ಬೆಲೆ ನೀಡದೇ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ಈಗ ನಿಗದಿ ಮಾಡಿರುವ ಪರಿಹಾರ ಮೊತ್ತದಲ್ಲಿ ಒಂದು ಸೈಟ್ ಕೂಡಾ ಬರುವುದಿಲ್ಲ. ನಮ್ಮ ಮಕ್ಕಳಿಗೆ ಜೀವನಾಂಶವಾಗಿದ್ದ ಭೂಮಿಯನ್ನು ಸೂಕ್ತ ಪರಿಹಾರ ಕೊಡದೇ ಯಾವುದೇ ಕಾರಣಕ್ಕೂ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ರೈತರ ಬೇಡಿಕೆಗಳೇನು?: ಪ್ರತಿ ಎಕರೆ ಕುಷ್ಕಿ ಜಮೀನಿಗೆ 1.5 ಕೋಟಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ನೀಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ.
ಪ್ರತಿ ಎಕರೆ ಅಡಕೆ ತೋಟಕ್ಕೆ 2.5 ಕೋಟಿ ಪರಿಹಾರ ನೀಡಬೇಕು. ನಿರಾಶ್ರಿತರ ರೈತರ ಕುಟುಂಬಕ್ಕೆ ಉದ್ಯೋಗ ಕೊಡಬೇಕು. ರೈತರು ಜಮೀನಿಗೆ ಹೋಗಲು ರಸ್ತೆ ಮಾಡಿಕೊಡಬೇಕು. ಸರ್ಕಾರಿ ಜಮೀನು, ಸರ್ಕಾರಿ ಪಡಾ, ಬಗರ್ ಹುಕುಂ, ಗ್ರಾಮ ಠಾಣಾಗಳಿಗೆ ಸೂಕ್ತವಾದ ಜಮೀನು ನಿಗದಿಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications